ಬೆಂಗಳೂರು : ಜೂನ್ 1ರಿಂದ ಆರಂಭವಾಗಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಪ್ರಥಮ ಕನ್ನಡ ಭಾಷೆಯ ಬರಹ ಪ್ರದರ್ಶಿತವಾಗುತ್ತಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರು ಜರ್ಸಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಕೆಎಂಎಫ್‌ನ ನಂದಿನಿಯ ಲಾಂಛನವಿರುವ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ. ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ ಆಟಗಾರರು ಧರಿಸುವ ಜೆರ್ಸಿ ಗಮನ ಸೆಳೆಯಲಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದು, ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ ಎಂದಿದ್ದಾರೆ.
ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.