ಕಾರವಾರ : ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಮುಂದುವರಿದಿದ್ದಕ್ಕೆ ಐಆರ್ಬಿ ಇಂಜಿನಿಯರ್ ಗೆ  ಸಚಿವ ಮಂಕಾಳ್ ವೈದ್ಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕಾರವಾರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.  ಒಂಬತ್ತು ವರ್ಷದಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೀರಿ.  ಇದುವರೆಗೂ ನಮ್ಮ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣ ಆಗಿಲ್ಲ.ಈಗ ಮಾಡಿರುವ ಕೆಲಸವನ್ನು ಅವೈಜ್ಞಾನಿಕವಾಗಿ ಮಾಡಿದ್ದೀರಿ. ನಿಮ್ಮಿಂದ ನಿತ್ಯ ಅಪಘಾತವಾಗಿ  ಜನ ಸಾಯುತ್ತಿದ್ದಾರೆಂದು ಸಂಬಂಧಪಟ್ಟವರ ವಿರುದ್ಧ ಹರಿ ಹಾಯ್ದರು.

ಮಳೆ  ಬಂದರೆ  ಹೆದ್ದಾರಿ ಮೇಲೆ ನೀರು ನಿಂತು ಜನರಿಗೆ ತೊಂದರೆಯಾಗುತ್ತಿದೆ. ಇನ್ನು ಎಷ್ಟು ದಿನ ಜನ ನಿಮ್ಮಿಂದ ಕಷ್ಟ ಅನುಭವಿಸಬೇಕು.  ನೀವು ಮಾಡಿದ ಅವಾಂತರದಿಂದ ಜನ ನಮ್ಮನ್ನ ಪ್ರಶ್ನೆ ಮಾಡ್ತಾರೆ.  ಇದು ನನ್ನ ಕೊನೆಯ ಎಚ್ಚರಿಕೆ ಮುಂದಿನ ಸಲ ಸಮಸ್ಯೆ ಬಗೆಹರಿಯದಿದ್ರೆ ಏನ್ ಮಾಡ್ತೆನಿ ನೋಡಿ ಎಂದು ಎಚ್ಚರಿಸಿದರು.

ಈ ನಡುವೆ ಐಆರ್ಬಿ ಇಂಜಿನಿಯರ್ ಅಮರ್ ಸಚಿವರಿಗೆ ಸಮಾಜಾಯಿಸಲು ಮುಂದಾದಾಗ ಸಚಿವ ಮಂಕಾಳ್ ವೈದ್ಯ ಗರಂ ಆದರು. ಜನರಿಗೆ ತೊಂದರೆಯಾದ್ರೆ ಸಹಿಸಲ್ಲ ಎಂದು ವಾರ್ನಿಂಗ್ ಮಾಡಿದರು.