ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಕಾರವಾರ(Karwar) : ಉತ್ತರಕನ್ನಡ(Uttarkanndada) ಜಿಲ್ಲೆಯಾದ್ಯಂತ ಅಪ್ರಾಪ್ತ ವಯಸ್ಕರು(Minors) ವಾಹನ ಚಾಲನೆ ಮಾಡುವುದು ಜಾಸ್ತಿಯಾಗುತ್ತಿದೆ. ಇದರ ವಿರುದ್ಧ ಉತ್ತರ ಕನ್ನಡ ಜಿಲ್ಲಾ ಪೊಲೀಸ್(Uttarakannada District Police) ಇಲಾಖೆಯು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿದೆ.

​ ಜನವರಿ 2026 ರಿಂದ ಸೆಪ್ಟೆಂಬರ್ 2026 ರವರೆಗೆ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಹಾಗೂ ಅವರಿಗೆ ಚಾಲನೆ ಮಾಡಲು ಅವಕಾಶ ನೀಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ, 1988ರ ಕಲಂ 199(ಎ) ಅಡಿಯಲ್ಲಿ ಒಟ್ಟು 131 ಪ್ರಕರಣಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯದ ವಿಚಾರಣೆ ಬಳಿಕ ಅಪ್ರಾಪ್ತ ವಯಸ್ಕರ ಪೋಷಕರು ಮತ್ತು ವಾಹನ ಮಾಲೀಕರಿಗೆ ಒಟ್ಟು ₹13,09,000/- ದಂಡ ವಿಧಿಸಲಾಗಿದೆ.

​ಭಟ್ಕಳದಲ್ಲಿ ಅತಿ ಹೆಚ್ಚು ಪ್ರಕರಣ: ದಾಖಲಾದ ಒಟ್ಟು ಪ್ರಕರಣಗಳಲ್ಲಿ ಭಟ್ಕಳ ನಗರ ಹಾಗೂ ಭಟ್ಕಳ ಗ್ರಾಮೀಣ(Bhatkal Town And Rural) ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಅಂದರೆ 45 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯವು ಒಟ್ಟು ₹5,38,500/- ದಂಡ ವಿಧಿಸಿದೆ.

​ಸಾರ್ವಜನಿಕರಿಗೆ ಎಚ್ಚರಿಕೆ: ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು ಅವರ ಜೀವಕ್ಕೆ ಮಾತ್ರವಲ್ಲದೆ ಇತರ ರಸ್ತೆ ಬಳಕೆದಾರರ ಸುರಕ್ಷತೆಗೂ ಗಂಭೀರ ಅಪಾಯ ತರುತ್ತದೆ. ಇಂತಹ ನಿಯಮ ಉಲ್ಲಂಘನೆಗಳಿಗೆ ವಾಹನದ ಮಾಲೀಕರು ಹಾಗೂ ಪೋಷಕರೇ ನೇರ ಹೊಣೆಗಾರರಾಗಿದ್ದು, ಸೂಕ್ತ ಕಾನೂನು ಕ್ರಮ ಮತ್ತು ದಂಡಕ್ಕೆ ಒಳಗಾಗಬೇಕಾಗುತ್ತದೆ.

​”ಅಪ್ರಾಪ್ತರಿಗೆ ವಾಹನ ನೀಡಬೇಡಿ – ಅವರ ಸುರಕ್ಷಿತ ಭವಿಷ್ಯವನ್ನು ಕಾಪಾಡಿ” ಎಂಬ ಸಂದೇಶದೊಂದಿಗೆ, ಯಾವುದೇ ಕಾರಣಕ್ಕೂ ದ್ವಿಚಕ್ರ ವಾಹನ, ಕಾರು ಅಥವಾ ಇತರ ಮೋಟಾರು ವಾಹನಗಳನ್ನು ಅಪ್ರಾಪ್ತ ಮಕ್ಕಳಿಗೆ ನೀಡದಂತೆ ಪೋಷಕರು ಹಾಗೂ ವಾಹನ ಮಾಲೀಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

​ಮುಂದಿನ ದಿನಗಳಲ್ಲೂ ಈ ತಪಾಸಣೆ ಮತ್ತು ಕಾನೂನು ಕ್ರಮಗಳು ಮುಂದುವರಿಯಲಿದ್ದು, ಸಾರ್ವಜನಿಕರು ರಸ್ತೆ ಸುರಕ್ಷತೆಗೆ ಸಹಕರಿಸಬೇಕಾಗಿ ಜಿಲ್ಲಾ ಪೊಲೀಸ್ ಇಲಾಖೆ(District Police Department) ಕೋರಿದೆ.