ಭಟ್ಕಳ: ಕಾಲು ನೋವಿಗೆ ಇಲ್ಲಿನ ಖಾಸಗಿ ಕ್ಲಿನಿಕ್‌ವೊಂದರಲ್ಲಿ ಚಿಕಿತ್ಸೆ ಪಡೆದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಮಹಿಳೆಯ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.
ಮುರುಡೇಶ್ವರ ಗರಡಿಗದ್ದೆಯ ನಿವಾಸಿ ಸಾವಿತ್ರಿ ಗೋವಿಂದ ನಾಯ್ಕ (57) ಮೃತ ಮಹಿಳೆ. ಈಕೆ ಕಾಲು ನೋವಿಗೆ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ, ಇದೀಗ ಕಾಲಿನಲ್ಲಿ ಸಣ್ಣ ಗಾಯವೊಂದು ಕಾಣಿಸಿಕೊಂಡು ನೋವು ಉಲ್ಬಣಿಸಿದ ಹಿನ್ನೆಲೆಯಲ್ಲಿ ಮತ್ತೆ ಚಿಕಿತ್ಸೆ ಪಡೆಯಲು ಅದೇ ಕ್ಲಿನಿಕ್‌ಗೆ ಬಂದಿದ್ದರು. ಕಾಲಿನ ಗಾಯಕ್ಕೆ ಚುಚ್ಚುಮದ್ದು ನೀಡಿದ ನಂತರ ಮಹಿಳೆ ಅಸ್ವಸ್ಥಗೊಂಡಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಸಮೀಪದ ಆರೆನ್ನೆಸ್ ಆಸ್ಪತ್ರೆ ಕರೆದೊಯ್ಯುವ ವೇಳೆ ಮಹಿಳೆ ಮೃತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಿಳೆ ಸಾವಿನ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಮಗ ಶಂಕರ ನಾಯ್ಕ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಳಿಸಿದ್ದಾರೆ.
ಮುರುಡೇಶ್ವರ ಠಾಣಾ ಎಸ್‌ಐ ಮಂಜುನಾಥ ತನಿಖೆ ಕೈಗೊಂಡಿದ್ದಾರೆ. ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ಹೇಳಲು ಸಾಧ್ಯ ಎಂದು ಠಾಣಾ ಎಸ್‌ಐ ಮಂಜುನಾಥ ತಿಳಿಸಿದ್ದಾರೆ. ಮೃತರಿಗೆ ಪತಿ, ಹಾಗೂ ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ.