ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಶಿವಮೊಗ್ಗ(Shivamogga): ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ತೀವ್ರ ಹೃದಯಾಘಾತ(Heartattack ಸಂಭವಿಸಿದ ವೇಳೆ, ಬಸ್ ಚಾಲಕ ಮತ್ತು ನಿರ್ವಾಹಕ ತೋರಿಸಿದ ಸಮಯಪ್ರಜ್ಞೆಯಿಂದಾಗಿ ಅಮೂಲ್ಯ ಜೀವವೊಂದು ಉಳಿದಿದೆ.
ಬೆನವಳ್ಳಿ ನಿವಾಸಿ ರಮೇಶ್ (45) ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕ ಎಂದು ಗುರುತಿಸಲಾಗಿದೆ.
ಸಂಭವಿಸಿದ್ದೇನು?: ರಿಪ್ಪನ್‌ಪೇಟೆಯಿಂದ ಶಿವಮೊಗ್ಗಕ್ಕೆ(Rippanapete to Shivamogga) ತೆರಳುತ್ತಿದ್ದ ಖಾಸಗಿ ಬಸ್ ಚಿನ್ನಮನೆ ಸಮೀಪ ಸಂಚರಿಸುತ್ತಿದ್ದಾಗ, ರಮೇಶ್ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ತಕ್ಷಣವೇ ಅರಿತುಕೊಂಡ ಬಸ್ ಚಾಲಕ ಮುಸ್ತಾಕ್ ಹಾಗೂ ನಿರ್ವಾಹಕ ಅಶ್ರಫ್, ಮಾರ್ಗಮಧ್ಯದ ಯಾವುದೇ ನಿಲ್ದಾಣಗಳಲ್ಲೂ ಬಸ್ ನಿಲ್ಲಿಸದೆ ನೇರವಾಗಿ ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯತ್ತ ಬಸ್ ಚಲಾಯಿಸಿದ್ದಾರೆ.
‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ: ಆಸ್ಪತ್ರೆಯ ಮುಖ್ಯದ್ವಾರದ ಬಳಿಯೇ ಬಸ್ ನಿಲ್ಲಿಸಿದ ಸಿಬ್ಬಂದಿ, ಸಹಪ್ರಯಾಣಿಕರ ನೆರವಿನೊಂದಿಗೆ ರಮೇಶ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ‘ಗೋಲ್ಡನ್ ಅವರ್’ನಲ್ಲಿ (ಸಕಾಲಿಕ ಸಮಯ) ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆತಿದ್ದರಿಂದ ರಮೇಶ್ ಅವರು ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಮಯಕ್ಕೆ ಸರಿಯಾಗಿ ಸ್ಪಂದಿಸಿ, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪ್ರಯಾಣಿಕನ ಜೀವ ಉಳಿಸಿದ ಬಸ್ ಚಾಲಕ ಮುಸ್ತಾಕ್ ಹಾಗೂ ನಿರ್ವಾಹಕ ಅಶ್ರಫ್ ಅವರ ಈ ಮಾನವೀಯ ಕಾರ್ಯಕ್ಕೆ ಪ್ರಯಾಣಿಕರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.