ಕಾರವಾರ(KARWAR) : ಅಂತೂ ಇಂತೂ ಕಾರವಾರ ನಗರಸಭೆಗೆ ಕೊನೆಯ ಅಲ್ಪ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಮಧ್ಯಾಹ್ನ ಮುಹೂರ್ತ ಫಿಕ್ಸ್ ಆಗಿದೆ.

ಬಿಜೆಪಿ(BJP) ಮತ್ತು ಕಾಂಗ್ರೆಸ್(CONGRESS) ಪಕ್ಷಗಳ ನಡುವೆ ತೀವ್ರ ಪೈಪೋಟಿ ಎದುರಾಯಿತಾದರೂ ಮೀನುಗಾರ ಮುಖಂಡ ರಾಜು ತಾಂಡೇಲ ನಿಧನದಿಂದ ಆಡಳಿತರೂಢ ಕಾಂಗ್ರೆಸ್ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳಿವೆ.

ಒಟ್ಟು 31 ಸದಸ್ಯ ಬಲದ ಕಾರವಾರ ನಗರಸಭೆಯಲ್ಲಿ 11ಕಾಂಗ್ರೆಸ್, 11ಬಿಜೆಪಿ, ಜೆಡಿಎಸ್ 4 ಮತ್ತು ಐವರು ಪಕ್ಷೇತರರಿದ್ದಾರೆ. ಈಗಾಗಲೇ ಬಿಜೆಪಿ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ತರುಣ ರವಿರಾಜ್ ಅಂಕೋಲೆಕರ ಅವರನ್ನ ಘೋಷಿಸಿದೆ. ಉಪಾಧ್ಯಕ್ಷ ಸ್ಥಾನವನ್ನ ಜೆಡಿಎಸ್ ನ ಪ್ರೀತಿ ಮಧುಕರ ಜೋಶಿ ಅವರನ್ನ ಆಯ್ಕೆಗೊಳಿಸುವ ಸಿದ್ಧತೆ ಮಾಡಿಕೊಂಡಿದೆ. 11 ಬಿಜೆಪಿ ಸದಸ್ಯರೊಂದಿಗೆ ಮೂವರು ಜೆಡಿಎಸ್ ಮತ್ತು ಮೂವರೂ ಪಕ್ಷೇತರ ಸದಸ್ಯರ ಬಲದೊಂದಿಗೆ ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ. ಆ ಪ್ರಯತ್ನದಲ್ಲಿ ಯಶಸ್ಸು ಕಾಣುವ ವಿಶ್ವಾಸದಲ್ಲಿದೆ.

ಇನ್ನೂ ಕಾಂಗ್ರೆಸ್ ಸಹ ತಮ್ಮ 11 ಸದಸ್ಯರು ಒಂದು ಜೆಡಿಎಸ್ ಮತ್ತು ಇಬ್ಬರು ಸದಸ್ಯ ಬಲ ಪಡೆದು ಅಧಿಕಾರಕ್ಕೇರಲು ಹವಣಿಸಿತ್ತು. ಜೊತೆಗೆ ಇನ್ನೂ ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರಿಗೆ ಸ್ಕೆಚ್ ಹಾಕಿತ್ತು. ಆದರೆ ಇತ್ತೀಚಿನ ಬೆಳವಣಿಗೆ ಅವರಿಗೆ ಹಿನ್ನಡೆ ಉಂಟು ಮಾಡಿದೆ. ಆದರೂ ಸಹ ತೆರೆ ಮರೆಯಲ್ಲಿ ಆಟ ಯಾವ ರೀತಿಯಾಗಿರುತ್ತೆ ಎಂಬುದು ಹೇಳುವುದು ಕಷ್ಟ.

ಸದ್ಯದ ಬೆಳವಣಿಗೆ ಪ್ರಕಾರ ಅಧ್ಯಕ್ಷರಾಗಿ ರವಿರಾಜ್ ಅಂಕೋಲೆಕರ್ ಉಪಾಧ್ಯಕ್ಷರಾಗಿ ಪ್ರೀತಿ ಮಧುಕರ್ ಜೋಶಿ ಅವರು ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ನಗರಸಭೆ ರಾಜಕೀಯ ಹೇಗಿರುತ್ತೆ ಎಂಬುದು ಮಧ್ಯಾಹ್ನ ಒಂದೂವರೆ ಬಳಿಕ ಗೊತ್ತಾಗಲಿದೆ.

ಇದನ್ನು ಓದಿ : ರಾಜನಂತೆ ನಡೆದ ರಾಜಣ್ಣ