ವಿಶೇಷ ಲೇಖನ.
ಕಾರವಾರ : ತಾನೊಮ್ಮೆ ಎಂಎಲ್ಎ ಆಗಬೇಕೆಂದು ಬಹುತೇಕ ರಾಜಕೀಯದಲ್ಲಿ ಇರುವವರ ಎಲ್ಲರ ಆಸೆ. ಕಾರವಾರದ ರಾಜಣ್ಣನಿಗೂ ಒಂದು ಸಲ ಎಂಎಲ್ಎ ಆಗಬೇಕೆಂಬ ಆಸೆಯಿತ್ತು. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಮಹಾದಾನಿ, ಕರಾವಳಿಗರ ಕಣ್ಮಣಿ ರಾಜು ತಾಂಡೇಲ ಅವರು ಅಕಾಲಿಕ ನಿಧನರಾಗಿದ್ದಾರೆ.
ರಾಜು ಲೋಕಪ್ಪ ತಾಂಡೇಲ ಕಳೆದ ಎರಡುವರೆ ದಶಕಗಳಿಂದ ಕಾರವಾರ ತಾಲೂಕಿನಲ್ಲಿ ಕೇಳಿ ಬಂದಿರುವ ಹೆಸರು. 54 ವರ್ಷದ ಇವರು ತಾಲೂಕಿನ ಬಿಣಗಾದಲ್ಲಿ ಜನಿಸಿದವರು. ಏಷ್ಯಾದ ಅತಿದೊಡ್ಡ ನೌಕಾನೆಲೆಗಾಗಿ ಕಾರವಾರ ಅಂಕೋಲಾ ತಾಲೂಕಿನ ಕಡಲತೀರಗಳು, ಭೂ ಪ್ರದೇಶಗಳು ಭೂಸ್ವಾಧೀನವಾದಾಗ ಸಾವಿರಾರು ಕುಟುಂಬಗಳು ನಿರಾಶ್ರಿತರಾದರು. ಅದೇ ರೀತಿ ಮೀನುಗಾರರ ನೂರಾರು ಕುಟುಂಬದ ಜೊತೆ ರಾಜು ತಾಂಡೇಲ ಅವರ ಕುಟುಂಬವೂ ನಿರಾಶ್ರಿತವಾಯಿತು. ಆಗ ಕಾರವಾರ ತಾಲೂಕಿನ ಚಿತ್ತಾಕುಲ ನಿರಾಶ್ರಿತರ ಕಾಲೋನಿಯಲ್ಲಿ ಜಾಗ ನೀಡಲಾಯಿತು. ಆಗಲೇ ಚಿತ್ತಾಕುಲ ನಿರಾಶ್ರಿತರ ಕಾಲೋನಿ ಗ್ರಾಮ ಪಂಚಾಯತ್ಗೆ ಒಳಪಟ್ಟಿತ್ತು.
ಆಗ ಗ್ರಾಮ ಪಂಚಾಯತ್ಗೆ ರಾಜು ಸ್ಪರ್ದಿಸಿದರು. ಗೆಲುವು ಕಂಡರು. ಅಂದಿನಿಂದ ನಿರಂತರವಾಗಿ ಸುಮಾರು ಎರಡುವರೆ ದಶಕಗಳಿಂದ ರಾಜು ತಾಂಡೇಲ ಚಿತ್ತಾಕುಲ ಗ್ರಾಮ ಪಂಚಾಯತ್ ಸದಸ್ಯರಾಗಿ ಜನಸೇವೆ ಮುಂದುವರಿಸಿದರು. ಎರಡು ಬಾರಿ ಅಧ್ಯಕ್ಷರಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದರು. ಈ ನಡುವೆ ರಾಜಕೀಯದ ಜೊತೆಗೆ ಜನ ಸೇವೆ ಮಾಡುತ್ತಾ ಜನಾನುರಾಗಿಯಾದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ರಾಜು ತಾಂಡೇಲ ಬೆಸ್ಟ್ ಅತ್ಲೇಟಿಕ್ ಪಟು. ಜಿಲ್ಲೆ ಮತ್ತು ರಾಜ್ಯದ ಉತ್ತಮ ಕ್ರೀಡಾಪಟು. ದೇಶ ಸೇವೆ ಮಾಡಬೇಕೆಂಬ ಹಂಬಲದೊಂದಿಗೆ ಭಾರತೀಯ ಸೇನೆಗೆ ಸೇರಬೇಕೆಂದು ಆಯ್ಕೆ ಶಿಬಿರಕ್ಕೆ ಹೋದರು. ಆಯ್ಕೆಯು ಆದರು. ಕುಟುಂಬದಲ್ಲಿ ಬಡತನ. ಚಿಕ್ಕಂದಿನಿಂದಲೇ ತಂದೆಯನ್ನ ಕಳೆದುಕೊಂಡ ರಾಜು ಅವರಿಗೆ ಮನೆಯ ಜವಬ್ದಾರಿ ನಿಭಾಯಿಸುವ ಹೊಣೆಯಿತ್ತು. ಪರಿಸ್ಥಿತಿ ಊರಿನಲ್ಲಿಯೇ ಮೀನುಗಾರಿಕೆ ನಡೆಸಬೇಕಾಯಿತು. ಮದುವೆಯಾದ ಬಳಿಕ ಮಾವನವರಿಗೆ ಸಹಾಯ ಮಾಡುತ್ತಾ ಯಾಂತ್ರಿಕ ದೋಣಿಯ ವ್ಯವಹಾರದ ಜವಬ್ದಾರಿ ನೋಡಿಕೊಳ್ಳುತ್ತಿದ್ದರು. ತಂದೆಯವರ ಕಾಲವಾದ ಬಳಿಕ ತಂದೆಯ ಹೆಸರಿನಲ್ಲಿ ಲೋಕಸ್ಮೃತಿ ಮತ್ತು ಲೋಕನಾಥ ಹೆಸರಿನ ಚಿಕ್ಕ ಬೋಟುಗಳನ್ನ ಮಾಡಿದ್ದರು. ಮದುವೆಯಾಗುವ ಪೂರ್ವದಲ್ಲಿ ಹಿಂದೆ ಕೆಲ ವರ್ಷಗಳ ಕಾಲ ಒಡಹುಟ್ಟಿದ ಸಹೋದರಿ ಬೇಬಿ ಅವರ ಮನೆಯಲ್ಲಿಯೇ ರಾಜು ತಮ್ಮ ದಿನ ಕಳೆದವರು.
ಬಳಿಕ ತಮ್ಮ ಕಸುಬಾದ ಮೀನುಗಾರಿಕೆಯಲ್ಲಿ ತುಂಬಾ ಪರಿಶ್ರಮದೊಂದಿಗೆ ಹಂತಹಂತವಾಗಿ ಬೆಳೆಯುತ್ತಾ ಸಾಗಿದರು. ನೂರಾರು ಕೈಗಳಿಗೆ ಕೆಲಸ ನೀಡಿದ್ದರು. ಕಾರ್ಮಿಕ ಕುಟುಂಬದ ಬಗ್ಗೆ ಅಪಾರ ಕಾಳಜಿ ಹೊಂದಿದ ರಾಜು ದುಡಿಮೆಯತ್ತ ಗಮನ ಹರಿಸಿದವರು. ಒಂದೆಡೆ ಪಂಚಾಯತ್ ಪ್ರತಿನಿಧಿಯಾಗಿ ಊರ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಸದಾ ಸಹಾಯ ಹಸ್ತ ಚಾಚುತ್ತಿದ್ದರು. ಕಷ್ಟ ಅಂತಾ ಬಂದವರ ನೆರವಿಗೆ ನಿಲ್ಲುತ್ತಿದ್ದರು. ಸಾವಿರಾರು ಕುಟುಂಬಗಳ ಕಣ್ಣೊರಿಸಿದ ಮಹಾನುಭಾವ ರಾಜು ತಾಂಡೇಲ. ಮಧ್ಯೆ ರಾತ್ರಿಯಲ್ಲೂ ಕೂಡ ಕರೆ ಮಾಡಿದವರ ಸ್ಪಂದಿಸಿ ಅವರ ನೆರವಿಗೆ ಧಾವಿಸುತ್ತಿದ್ದರು. ಅದೆಷ್ಟೋ ಅನಾರೋಗ್ಯಪೀಡಿತರ ಸೇವೆ ಮಾಡಿದವರು. ದೇವರು ನನಗೆ ಕೊಟ್ಟಿದ್ದಾನೆ. ತಾನು ಸೇವೆ ಮಾಡುತ್ತೇನೆಂದು ಮಾಡಿದವರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರು ರಾಜುವಿನ ಸಹಕಾರ ಪಡೆದೇ ಮುಂದೆ ಸಾಗುತ್ತಿದ್ದರು. ತುಂಬಾ ಹಠವಾದಿಯಾಗಿರುವ ರಾಜು ತಾಂಡೇಲ, ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯದೇ ಯಶಸ್ಸು ಕಾಣುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಸಮೀಕ್ಷೆ ಮಾಡಿಸಿ ಕ್ಷೇತ್ರದ ಜನ ಯಾವ ನಿಲುವು ಹೊಂದಿದ್ದಾರೆ ಎಂದು ಚುನಾವಣೆ ಪೂರ್ವದಲ್ಲಿ ಅರಿತುಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದರು. ಅವರ ಪ್ರಯತ್ನದ ಫಲವಾಗಿ ಇಂದು ಕಾರವಾರದಲ್ಲಿ ಸತೀಶ ಸೈಲ್ ಶಾಸಕರಾಗಿ ಕೆಲಸ ಮಾಡುವಂತಾಗಿದೆ.
ನಾಲ್ಕು ವರ್ಷಗಳ ಹಿಂದೆ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ ಜವಬ್ದಾರಿ ಹೊತ್ತಿದ್ದರು. ಉತ್ತರಕನ್ನಡ ಜಿಲ್ಲೆಯ ಮೀನುಗಾರಿಕಾ ವಲಯದ ಶ್ರೇಯೋಭಿವೃದ್ದಿಗೆ ಗಮನ ಹರಿಸುತ್ತಿದ್ದರು. ಹೊಸ ತಲೆಮಾರು ಇವತ್ತಿನ ಸಮಾಜದಲ್ಲಿ ಬೆಳೆಯಬೇಕು. ಆ ನಿಟ್ಟಿನಲ್ಲಿ ರಾಜಣ್ಣ ಯುವಕರ ಪಡೆಯನ್ನ ಕಟ್ಟಿದ್ದರು. ಎಲ್ಲೋ ಒಂದೆಡೆ ಇರುವ ಯುವಕರನ್ನ ತಮ್ಮ ಕರೆದುಕೊಂಡು ತಮ್ಮಂತೆ ಜನರ ಸೇವೆ ಮಾಡುವಂತೆ ಪ್ರಚೋದಿಸುತ್ತಿದ್ದರು. ತಾನು ತಿನ್ನುವವರಲ್ಲ. ಬೇರೆಯವರು ಬ್ರಷ್ಟಾಚಾರ ಮಾಡಲು ಬಿಡುತ್ತಿರಲಿಲ್ಲ ರಾಜಣ್ಣ.
ಮೀನುಗಾರ ಕುಟುಂಬದವರಾದರೂ ಕೂಡ ಯಾವುದೇ ಜಾತಿ ಬೇಧವಿಲ್ಲದೇ ಸಾವಿರಾರು ಜನರಿಗೆ ಸಹಾಯ ನೀಡುತ್ತಿದ್ದರು. ಶಾಲಾ ಕಾಲೇಜುಗಳ ಯಾವುದೇ ಕಾರ್ಯಕ್ರಮವಿರಲಿ, ಕ್ರೀಡಾ ಕಾರ್ಯಕ್ರಮವಿರಲಿ, ಸಂಘ ಸಂಸ್ಥೆಯ ಕಾರ್ಯಕ್ರಮಗಳಿಗೆ ರಾಜಣ್ಣ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಆರೋಗ್ಯ ಸಮಸ್ಯೆಯಂತ ಬಂದವರು, ಶಿಕ್ಷಣಕ್ಕಾಗಿ ಬಂದವರಿಗೆ ಅವರು ಸದಾ ಅವರ ಕೈ ಮುಂದಿರುತ್ತಿತ್ತು. ಹೀಗಾಗಿ ರಾಜಣ್ಣ ಉತ್ತರಕನ್ನಡ ಜಿಲ್ಲೆಯ ಪಾಲಿಗೆ ಮಹಾದಾನಿಯೆಂದರು ತಪ್ಪಲ್ಲ.
ಮುಂದೆ ಒಮ್ಮೆ ನಾನು ಶಾಸಕನಾಗಬೇಕು. ಕ್ಷೇತ್ರದ ಜನರ ಅಭಿವೃದ್ದಿ ಮಾಡಬೇಕೆಂದು ಕನಸು ಕಂಡಿದ್ದರು. ಆದ್ರೆ ರಾಜಣ್ಣ ತಮ್ಮ ಎಳೆ ವಯಸ್ಸಿನಲ್ಲಿ ಎಲ್ಲರಿಂದ ದೂರವಾಗಿದ್ದಾರೆ. ಕರಾವಳಿಯ ಮಹಾ ಚೇತನವೊಂದು ಮರೆಯಾಗಿದೆ. ಕುಟುಂಬ, ಆಸ್ತಿ ಎಲ್ಲವನ್ನು ಬಿಟ್ಟು ದೂರ ನಡೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಅಭಿಮಾನಿಗಳು ಮಮ್ಮಲ ಮರುಗಿದ್ದಾರೆ. ಯಾವುದೇ ಹಮ್ಮುಬಿಮ್ಮು ಇಲ್ಲದೇ ರಾಜಣ್ಣ ಜನರ ನಡುವೆ ಮಿಂಚಿ ಮರೆಯಾಗಿದ್ದಾರೆ. ರಾಜಣ್ಣ ಮತ್ತೆ ಹುಟ್ಟಿ ಬಾ. ಮತ್ತೆ ಹುಟ್ಟಿ ಬಾ, ಎಂದು ಕರಾವಳಿಯ ಜನತೆ ಪ್ರಾರ್ಥಿಸಿದ್ದಾರೆ.