ಅಂಕೋಲಾ(ANKOLA): ತಾಲೂಕಿನ ಹಾರವಾಡ ರೈಲ್ವೆ ಸ್ಟೇಷನ್(HARWAD RAILWAY STATION) ವ್ಯಾಪ್ತಿಯಲ್ಲಿ ರೈಲ್ವೆ ಹಳಿಯ ಜಾಯಿಂಟ್ ಜೋಡನೆ ತುಂಡಾದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ರೈಲ್ವೆ ಇಲಾಖೆಯ ಟ್ರ್ಯಾಕ್ ಮ್ಯಾನ್ ಅವರ ಸಮಯ ಪ್ರಜ್ಞೆಯಿಂದ ತಪ್ಪಿದೆ.
ಮಂಗಳವಾರ ಬೆಳಿಗ್ಗಿನ ಜಾವ ನಾಲ್ಕುವರೆ ಗಂಟೆ ಸುಮಾರಿಗೆ ಹಾರವಾಡ ರೈಲ್ವೆ ಸ್ಟೇಷನ್ ಬಳಿ ರೈಲ್ವೆ ಹಳಿಯ (RAILWAY TRACK) ಜೋಡಣೆ ತುಂಡಾಗಿರುವುದು ರೈಲ್ವೆ ಟ್ರ್ಯಾಕ್ ಮ್ಯಾನ್(TRACK MAN) ಛತ್ರಪತಿ ಆನಂದು ಗೌಡ ಅವರ ಗಮನಕ್ಕೆ ಬಂದಿದೆ. ತಕ್ಷಣ ಅವರು ಅದನ್ನು ಕೂಡಲೇ ಸ್ಟೇಷನ್ ಮಾಸ್ಟರ್ ಅವರಿಗೆ ತಿಳಿಸಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಇಲಾಖೆಯ ಅಧಿಕಾರಿಗಳು ಆ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ತಡೆ ಹಿಡಿದು ರೈಲ್ವೆ ಹಳಿಯ ದುರಸ್ಥಿಗೆ ಕ್ರಮ ಕೈಗೊಂಡಿದ್ದಾರೆ.
ಬೆಳಗಿನ ಜಾವದ ಸಮಯದಲ್ಲಿ ಈ ಪ್ರದೇಶದಿಂದ ಕೆಲವು ವೇಗದೂತ ರೈಲುಗಳ ಸಂಚಾರ ನಡೆಸಬೇಕಿದ್ದರಿಂದ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಆದರೆ ಟ್ರ್ಯಾಕ್ ಮ್ಯಾನ್ ಅವರ ಜಾಗರೂಕತೆಯ ಪರಿಶೀಲನೆ ಮತ್ತು ಸಮಯ ಪ್ರಜ್ಞೆಯಿಂದ ಅನಾಹುತ ಸಂಭವಿಸುವುದು ತಪ್ಪಿದೆ.
ಕೊಂಕಣ ರೈಲ್ವೆಯ(KONKAN RAILWAY) ಹಿರಿಯ ಅಧಿಕಾರಿಗಳು ಹಾರವಾಡಕ್ಕೆ ಆಗಮಿಸಿ ಸಂಭವನೀಯ ದುರಂತ ತಪ್ಪಿಸಿದ ಟ್ರ್ಯಾಕ್ ಮ್ಯಾನ್ ಛತ್ರಪತಿ ಆನಂದು ಗೌಡ ಅವರನ್ನು ಸನ್ಮಾನಿಸಿ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಕೊನೆಗೆ ಸಿಕ್ಕ ಎಲುಬಿನ ಬಗ್ಗೆ ಸಂಶಯ
ಉತ್ತರಕನ್ನಡ ಜಿಲ್ಲೆಗೆ ತಿರುಪತಿ ರೈಲು