ಕಾರವಾರ : ಅಂತೂ ಇಂತೂ ಕಾಳಿ ಸೇತುವೆ ಮೇಲಿಂದ ಬಿದ್ದ ಲಾರಿ ಎತ್ತುವ ಕಾರ್ಯಾಚರಣೆ ಯಶಸ್ವಿಯಾಗಿದೆ.
ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದವರು ಐಆರ್ಬಿ ಕಂಪನಿ ಕಾರ್ಮಿಕರ ಸಹಾಯದಿಂದ ದಡಕ್ಕೆ ತಂದಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಲಾರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು.
ಕಾರವಾರ ಮತ್ತು ಗೋವಾ ಸಂಪರ್ಕಿಸುವ ರಾಷ್ಟೀಯ ಹೆದ್ದಾರಿಯಲ್ಲಿನ ಕೆಳಕ್ಕೆ ಲಾರಿ ಬಿದ್ದಿತ್ತು. ಆಗಸ್ಟ್ ಏಳರಂದು ಬೆಳಿಗ್ಗೆ ಒಂದು ಗಂಟೆ ಸುಮಾರಿಗೆ 41 ವರ್ಷ ಹಳೆಯ ಕಾಳಿ ಸೇತುವೆ ಕುಸಿದು ಆತಂಕ ಉಂಟುಮಾಡಿತ್ತು. ತಮಿಳುನಾಡು ಮೂಲದ ಲಾರಿ ಬಿದ್ದಿದರಿಂದ ಅದೃಷ್ಟವಾಶಾತ್ ಚಾಲಕ ಬಾಲ ಮುರುಗನ್ ಎಂಬಾತನನ್ನ ಸ್ಥಳೀಯರು ಬಚಾವ್ ಮಾಡಿದ್ದರು.
ಘಟನೆ ನಡೆದು ಒಂಬತ್ತು ದಿನಗಳ ನಂತರ ಇಂದು ಲಾರಿ ಮಾಲೀಕನ ಮನವಿ ಮೇರೆಗೆ ಲಾರಿ ದಡಕ್ಕೆ ಎಳೆಯುವ ಕಾರ್ಯ ನಡೆಸಲಾಗಿತ್ತು. ನಡುವೆ ಒಂದೆರಡು ಬಾರೀ ಹಗ್ಗ ತುಂಡಾಗಿ ಕಾರ್ಯಾಚರಣೆಗೆ ಅಡ್ಡಿಯಾಯಿತು. ಒಮ್ಮೆ ನದಿಯ ನಡುವೆ ಬಂಡೆಗಲ್ಲು ಸಿಲುಕಿ ಕಾರ್ಯಾಚರಣೆ ಕಷ್ಟವಾಯಿತು. ನಂತರ ಈಶ್ವರ್ ಮಲ್ಪೆ ಮುಳುಗಿ ಮತ್ತೆ ರೋಪ್ ಸರಿಪಡಿಸಿ ಹಿಂದಕ್ಕೆ ಮುಂದಕ್ಕೆ ಸರಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತೂ 9 ಗಂಟೆಗಳ ನಿರಂತರ ಪ್ರಯತ್ನದಿಂದ ಲಾರಿ ದಡಕ್ಕೆ ತರಲಾಗಿದೆ. ಆಪರೇಷನ್ ಲಾರಿ ಯಶಸ್ವಿಯಾಗಿದೆ. ಕಾರ್ಯಾಚರಣೆ ನೋಡಲು ಸಾವಿರಾರು ಸಂಖ್ಯೆಯ ನಾಗರಿಕರು ಜಮಾಯಿಸಿದ್ದರು.