ಅಂಕೋಲಾ : ಪುಟ್ಟ ಬಾಲಕನೋರ್ವ ಶಿರೂರು ಗುಡ್ಡ ಕುಸಿತದ ಹಿನ್ನಲೆಯಲ್ಲಿ ಹಸಿದವರಿಗೆ ತನ್ನಲ್ಲಾಗುವ ಕಿಂಚಿತ್ ಸಹಾಯ ಮಾಡಿದ್ದಾನೆ.

ಕುಮಟಾದ ನಕ್ಷ ಶ್ರೀಧರ್ ಕುಮಟಾಕರ್ ಎನ್ನುವ ಏಳು ವರ್ಷದ ಬಾಲಕ ಕಳೆದೊಂದು ವಾರದಿಂದ ಬೆಳಸೆ ಸಮೀಪ ತಾಮ್ಮೂರಿನ ಹಿರಿಯರೊಂದಿಗೆ ಕೈ ಜೋಡಿಸಿದ್ದಾನೆ. ಅಂಕೋಲದ ಶಿರೂರು ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಹೆದ್ದಾರಿಯಲ್ಲಿ ವಾಹನ ಚಾಲಕರು ಪರದಾಡಿದ್ದಾರೆ. ಮಾಧ್ಯಮದವರು ಹೆದ್ದಾರಿ ನಡುವೆ ತಮ್ಮ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಸಹ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸ್ಥಳದಲ್ಲಿ ಹೊಟ್ಟೆಗೆ ತಿನ್ನಲು ಏನು ಸಿಗುತ್ತಿಲ್ಲ.

ಹೀಗಾಗಿ ಕಾರವಾರದ ಜಿ.ಪಂ ಮಾಜಿ ಸದಸ್ಯೆ ಚೈತ್ರಾ ಕೊಟರಕರ್ ಅವರ ಸಹಾಯದಿಂದ ಕಳೆದೊಂದು ವಾರದಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ನಕ್ಷ ಶ್ರೀಧರ್ ಕುಮಟಾಕರ್ ಜೊತೆಯಲ್ಲಿ ಅನ್ನದಾನದ ಮಹತ್ಕಾರ್ಯ ಮಾಡುತ್ತಿದ್ದಾನೆ.

ಹೆದ್ದಾರಿಯಲ್ಲಿ ನೊಂದವರಿಗಾಗಿ ಈ ಪುಟ್ಟ ಬಾಲಕ ಮರುಗುತ್ತಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ಜನ ಸಾಮಾನ್ಯರು ಪಡುತ್ತಿರುವ ಕಷ್ಟ ಈ ಪುಟ್ಟ ಬಾಲಕನಿಗೆ ಅರಿವಾಗಿದೆ. ಹೀಗಾಗಿ ತಾನು ಸಹ ಹಿರಿಯರೊಂದಿಗೆ ಕೈ ಜೋಡಿಸುತ್ತಿರುವುದಾಗಿ ಹೇಳಿದ್ದಾನೆ ನಕ್ಷ. ಬಾಲಕನ ಈ ಕಳಕಳಿಗೆ ನಾವು ಹ್ಯಾಟ್ಸಾಪ್ ಹೇಳಲೇಬೇಕು.