ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ ಕಾರವಾರ 15 ವರ್ಷಗಳಲ್ಲಿ  ಮತ್ತೆ ಜಲಪ್ರಳಯಕ್ಕೆ ಸಿಕ್ಕಿ ನಲುಗಿದೆ. ಜೂನ್ 12ರಂದು ಉಂಟಾದ ಮೇಘಸ್ಪೋಟಕ್ಕೆ ಜನತೆ ತತ್ತರಿಸಿದ್ದಾರೆ.

ಆದರೆ ಬೆಳೆಯುತ್ತಿರುವ ಕಾರವಾರ ನಗರಕ್ಕೆ ಮಹಾಮಳೆ ಎಚ್ಚರಿಕೆಯ ಪಾಠವನ್ನ ಕಲಿಸಿದೆ. ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿವರೆಗೆ ಸುರಿದ ಮಳೆ  ನಗರದ ಹಲವು  ರಸ್ತೆಗಳು ಜಲಾವೃತಗೊಳ್ಳುವಂತೆ ಮಾಡಿತು. 2009 ಅಕ್ಟೋಬರ್ 2 ರಂದು ಇದೇ ರೀತಿ ಕಾರವಾರ ತಾಲೂಕಿನ ಜನತೆ ಮಳೆಯಿಂದ ಗಂಡಾಂತರ ಎದುರಿಸಿದ್ದರು. ಕಾರವಾರ ನಗರ, ಅರಗಾ, ಚೆಂಡಿಯಾ, ತೋಡೂರು ಸೇರಿದಂತೆ ಹಲವು ಗ್ರಾಮಗಳ ಮುಳುಗಿತ್ತು. ಸಾವಿರಾರು ಕುಟುಂಬಗಳು ತಮ್ಮ ಮನೆಗಳನ್ನ ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಂದು ಕಡವಾಡ ಗ್ರಾಮದ ಜರಿವಾಡದಲ್ಲಿ ಗುಡ್ಡ ಕುಸಿದು 19ಕ್ಕೂ ಹೆಚ್ಚು ಜನರು ಭೂ ಸಮಾಧಿಯಾಗಿದ್ದರು. ಕೆಲ ಕುಟುಂಬಗಳು ಅನಾಥವಾಗಿತ್ತು. ಹಲವು ದಿನಗಳ ಕಾರ್ಯಾಚರಣೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನ ಹೈರಾಣು ಮಾಡಿತ್ತು. ಅಂದಿನ ಘಟನೆ ನೆನೆಸಿಕೊಂಡರೆ ಮೈ ಜುಮ್ ಎನಿಸುತ್ತದೆ. ವಾರಗಟ್ಟಲೇ ಮಳೆ, ಗುಡ್ಡಕ್ಕೆ ಚಾಚಿರುವ ಕಾರ್ಮೋಡ ಜನರು ಆತಂಕಗೊಳ್ಳುವಂತೆ ಮಾಡಿತ್ತು.

ಮತ್ತೆ ಈಗ ಕಾರವಾರದಲ್ಲಿ ಜಲಪ್ರಳಯ ಉಂಟಾಗಿದೆ. ಹಬ್ಬುವಾಡ ರಸ್ತೆ, ಗೀತಾಂಜಲಿ ಮುಂಭಾಗ, ಹಿಂದು ಹೈಸ್ಕೂಲ್ ಮುಂಭಾಗ, ಬಾಂಡಿಶಿಟ್ಟಾ, ನಂದನಗದ್ದಾ, ಕೋಡಿಭಾಗ , ಹೈಚರ್ಚ್, ಬ್ರಾಹ್ಮಣಗಲ್ಲಿ, ಮಾರುತಿಗಲ್ಲಿ,   ನಗರಸಭೆ ಮುಂದೆ ಇರುವ ಎಂ ಜಿ ರೋಡ್,  ಬೈತಖೋಲ್, ಅಲಿಗದ್ದಾ, ಸದಾಶಿವಗಢ, ಬಿಣಗಾ, ಅರಗಾ  ಸೇರಿದಂತೆ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಜಿಲ್ಲಾಸ್ಪತ್ರೆಗೂ ನೀರು ನುಗ್ಗಿದ್ದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

ಅಷ್ಟಕ್ಕೂ ನಮ್ಮ ಕಾರವಾರ, ರಾಜಧಾನಿ ಬೆಂಗಳೂರಿನಂತಾಗುತ್ತಿದೆಯಾ? ಖಂಡಿತ ಇಲ್ಲ. ಕಾರವಾರದಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಾಗಿದೆ. ನಿರ್ಮಾಣ ಹಂತದ ಸರ್ಕಾರಿ ಕಟ್ಟಡಗಳು ಆಗುತ್ತಲೆ ಇದೆ. ಆದರೆ, ಗೊತ್ತು ಗುರಿಯಿಲ್ಲದೇ ಕಟ್ಟಡಗಳು ನಿರ್ಮಾಣವಾಗುತ್ತಿರುವುದೇ ಇದಕ್ಕೆಲ್ಲ ಕಾರಣ ಎಂಬುದು ಜನರ ಅಭಿಪ್ರಾಯ.

ನಗರದಲ್ಲಿ ಕಟ್ಟಡ ನಿರ್ಮಿಸಬೇಕಾದರೇ ನಗರಸಭೆ ಅನುಮತಿ ಬೇಕು. ಆದರೆ ಕೇವಲ ಕಟ್ಟಡಕ್ಕೆ ಮಾತ್ರ ಸೀಮಿತವಾಗಿ ಬಿಲ್ಡರ್ ಗಳು ಕಟ್ಟಡ ನಿರ್ಮಿಸುತ್ತಾರೆ. ಪೂರ್ವಾಪರ ಯೋಚಿಸದೇ, ಮಳೆ ನೀರು ಹರಿದು ಹೋಗಲು ಜಾಗ ಮಾಡಿಕೊಡದೇ ಕಟ್ಟಡ, ಕಾಂಪೌಂಡ್ ನಿರ್ಮಿಸಿದರೇ ಹೇಗೆ ಎಂದು ಆಲೋಚನೆ ಸಾಮಾನ್ಯ ಮನುಷ್ಯನಿಗಾದರೂ ಗೊತ್ತು.

ಇಲಿ, ಹಾವು ಹೋಗುವಷ್ಟು  ತೂತು ಮಾಡಿದರೇ ಮಳೆ ನೀರು ಹರಿದು ಹೋಗುವುದಾದರೂ ಹೇಗೆ. ನಗರಸಭೆ ಪಕ್ಕದಲ್ಲಿ ಸರ್ಕಾರದ ಪ್ರಜಾಸೌಧ ಕಟ್ಟಡ ನಿರ್ಮಾಣವಾಗಿದೆ. ಮೊನ್ನೆ ಸುರಿದ ಮಳೆಯಿಂದ ಈ ನೂತನ ಕಟ್ಟಡದ ಮುಂಭಾಗದ ರಸ್ತೆ ಜಲಾವೃತವಾಗಿದೆ. ಈ ರಸ್ತೆ ಮೊದಲ ಬಾರೀಗೆ ಜಲಾವೃತವಾಗಿರುವುದಕ್ಕೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳಬೇಕು. ಯಾಕಂದ್ರೆ ಮಳೆ ನೀರು ಸರಾಗವಾಗಿ ಮುಂದಕ್ಕೆ ಹೋಗಿದ್ದರೇ ಸಮಸ್ಯೆ ಆಗುತ್ತಿರಲಿಲ್ಲ. ಇಲ್ಲಿ ಅಧಿಕಾರಿಗಳ ಬಗ್ಗೆ ದೂಷಿಸುತ್ತಿಲ್ಲ. ಆದರೆ ಚರಂಡಿಯ ಮೂಲಕ ನೀರು ಪಕ್ಕದ ರಾಷ್ಟ್ರೀಯ ಹೆದ್ದಾರಿ ದಾಟಿ ಸಮುದ್ರದ ಕಡೆ ಸಾಗುತಿತ್ತು. ಆದರೆ ಈ ಬಾರೀ ನಗರಸಭೆಯಿಂದ ಕೆಲ ಕಡೆಗಳಲ್ಲಿ ಚರಂಡಿ ಸ್ವಚ್ಚತೆ ಸಮರ್ಪಕವಾಗಿ ನಡೆದಿಲ್ಲ ಎಂಬ ಆರೋಪವಿದೆ.

ಹೀಗಾಗಿ ಬಾರೀ ಮಳೆ ಬಂದರೆ ಮುಂದೆ ಕಾರವಾರ ನಗರ ಮುಳುಗೋದು ಖಂಡಿತ ಎಂಬುದಕ್ಕೆ ಮೊನ್ನೆಯ ಜಲಪ್ರಳಯವೇ ಸಾಕ್ಷಿ. ಮಳೆಯ ಆವಾಂತರದಿಂದಾಗಿ ಸಾಕಷ್ಟು ವಾಹನಗಳು, ಇಲೆಕ್ಟ್ರಾನಿಕ್ಸ್ ವಸ್ತುಗಳು, ಪೀಠೋಪಕರಣಗಳು, ಬಟ್ಟೆ ಸೇರಿದಂತೆ ಕೋಟ್ಯಾಂತರ ಹಾನಿ ಸಂಭವಿಸಿದೆ.

ಬೈತಖೋಲ್ ಭಾಗದಲ್ಲಿ ಅವೈಜ್ಞಾನಿಕ ಕಾಂಪೌಂಡ್ ಕಾಮಗಾರಿಯಿಂದ ಬಡ ಕುಟುಂಬಗಳು ಮನೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಮಾಲಿನಿ ಫೆಡ್ನೆಕರ್ ಎಂಬುವವರ ಮನೆ ಈಗಾಗಲೇ ಧರಶಾಹಿಯಾಗಿದೆ. ಪ್ರವಾಹದಂತೆ ನುಗ್ಗಿದ ಮಳೆ ನೀರು ಇನ್ನಷ್ಟು ಮನೆಗಳನ್ನ  ಬೀಳುವಂತ ಸನ್ನಿವೇಶ ಸೃಷ್ಟಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟರೇ ಪರಿಸ್ಥಿತಿ ಅರ್ಥವಾಗಬಹುದು. ಮುಂದಾಗುವ ಅಪಾಯವನ್ನು ತಪ್ಪಿಸಬಹುದಾಗಿದೆ.

ಹಬ್ಬುವಾಡ ರಸ್ತೆ ಪಕ್ಕದಲ್ಲಿರುವ ಕೆಎಸ್ಆರ್ಟಿಸಿ ಡಿಪೋ ಮಳೆಗಾಲದಲ್ಲಿ ಯಾವಾಗಲು ಮುಳುಗಿಯೇ ಇರುತ್ತದೆ. ಸಮಸ್ಯೆ ಬಗೆಹರಿಸಿಕೊಳ್ಳಲು ಇದುವರೆಗೆ ಅಧಿಕಾರಿಗಳು ಮುಂದಾಗದಿರುವುದರಿಂದ ಮತ್ತೆ ಮತ್ತೆ ತೊಂದರೆ ಉಂಟಾಗುತ್ತಿವೆ. ಅಕ್ಕಪಕ್ಕದ ಪ್ರದೇಶಗಳ ಜನರು ತೊಂದರೆ ಎದುರಿಸುವಂತಾಗಿದೆ. ಇಲ್ಲಿ ಅಧಿಕಾರಿಗಳು ಒಂದಾಗಿ ಸೂಕ್ತ ಯೋಜನೆ ರೂಪಿಸಿದರೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಇಲ್ಲಿನ ಜನಪ್ರತಿನಿಧಿಗಳನ್ನ , ಜನತೆಯನ್ನ ವಿಶ್ವಾಸಕ್ಕೆ ತೆಗೆದಿಕೊಂಡು ಕಾರವಾರದಲ್ಲಿ ಮುಂದಾಗಬಹುದಾದ ಅನಾಹುತ ತಪ್ಪಿಸಬೇಕಾಗಿದೆ.
ಇದನ್ನೂ ಓದಿ : ಅಹಮದಾಬಾದ್ ದುರಂತ. ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ.

ಮುಂಡಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ದಾಖಲು. ನಿರಂತರ ವರ್ಷಧಾರೆಯಿಂದ ಜನಜೀವನ ಅಸ್ತವ್ಯಸ್ತ.