ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ಭಟ್ಕಳ(Bhatkal) : ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ(Bhatkal Taluku) ಮುರಿನಕಟ್ಟೆ ಪ್ರದೇಶದಲ್ಲಿ(Murinakatte Area) ದೇವರ ಕಟ್ಟೆ ವಿಚಾರವಾಗಿ ಉದ್ಭವಿಸಿರುವ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ(NH 66) ಅಂಚಿನಲ್ಲಿರುವ ದೇವರ ಹೊರೆ ಕೂರಿಸುವ ಪ್ರದೇಶದಲ್ಲಿ ಹಲವು ವರ್ಷಗಳಿಂದ ದೇವರ ಕಟ್ಟೆ ಇತ್ತು ಎನ್ನಲಾಗಿದ್ದು, ಕೆಲ ತಿಂಗಳ ಹಿಂದೆ ಅದನ್ನು ತೆರವುಗೊಳಿಸಲಾಗಿತ್ತು. ಭಾನುವಾರ ಸ್ಥಳೀಯ ನಾಗರಿಕರು ಪುನಃ ಕಟ್ಟೆ ನಿರ್ಮಿಸಿದ ಹಿನ್ನೆಲೆ ಒಂದು ಕೋಮಿನ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿ ಕೆಡವಿದ್ದಾರೆ.

ಕಟ್ಟೆ ತೆರವುಗೊಳಿಸುವಂತೆ ಒತ್ತಾಯ ಕೇಳಿಬಂದ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನಾ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇನ್ನೊಂದೆಡೆ, ಕಟ್ಟೆ ತೆರವುಗೊಳಿಸಿದ ವಿಚಾರ ಖಂಡಿಸಿ ಹಿಂದು ಸಂಘಟನೆ(Hindu Sanghatane) ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ದೇವರ ಕಟ್ಟೆಯನ್ನು ಪುನರ್ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಘಟನೆಯ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ಪಟ್ಟಣ(Bhatkal Town) ಹಾಗೂ ಜಾಲಿ ಪಟ್ಟಣ ಪಂಚಾಯತ್(Jali Pattana Panchayat) ವ್ಯಾಪ್ತಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭಟ್ಕಳ ನಗರದಾದ್ಯಂತ  ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮುರಿನಕಟ್ಟೆ ವಿವಾದಿತ ಜಾಗದ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಭಟ್ಕಳದಲ್ಲಿ ಬೀಡು ಬಿಟ್ಟಿದ್ದಾರೆ.