ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಸಂತ್ರಸ್ತರಾದ ಸಗಡಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಳುವರೆಯಲ್ಲಿ  ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ತಮ್ಮ ವೈಯಕ್ತಿಕ ಹಣದಿಂದ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿ  ಧನಸಹಾಯ ಮಾಡಿದರು.

ದುರಂತ ಸಂಭವಿಸಿದ ತಕ್ಷಣವೇ ಅವರು ಉಳುವರೆಗೆ ಭೇಟಿ ನೀಡಿದ ಅಲ್ಲಿನ ಪರಿಸ್ಥಿತಿ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ವಿವರಿಸಿದ್ದರು. ಹಾಗಾಗಿ ವಿಜಯೇಂದ್ರ ತಾಲೂಕಿನ ಶಿರೂರು ಮತ್ತು ಉಳುವರೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಹೋಗಿದ್ದರು.

ರವಿವಾರದಂದು ಉಳುವರೆಗೆ ಭೇಟಿ ನೀಡಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಶಿರೂರು ದುರಂತ ಹಲವರ ಸಾವು ನೋವಿಗೆ ಕಾರಣವಾಗಿದೆ. ಉಳುವರೆಯ ಜನರು ಬದುಕಿನುದ್ದಕ್ಕೂ ಸಂಪಾದನೆ ಮಾಡಿದ್ದನ್ನು ಹಾಗೂ ಮನೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಅವರಿಗೆ ಸೂಕ್ತ ಪರಿಹಾರ ವಿತರಿಸಬೇಕು. ಇಂದಿನ ಯಡಿಯೂರಪ್ಪ ಸರ್ಕಾರದಲ್ಲಿ ನೀರು ನುಗ್ಗಿದ ಮನೆಗಳಿಗೆ ತಾತ್ಕಾಲಿಕವಾಗಿ ಹತ್ತು ಸಾವಿರ ರೂಪಾಯಿ ಪರಿಹಾರ ನೀಡುತ್ತಿತ್ತು. ಈಗಲೂ ಅದೇ ಮಾದರಿಯಲ್ಲಿ ಪರಿಹಾರ ನೀಡಬೇಕು. ಕಾಳಜಿ ಕೇಂದ್ರವೆನ್ನುವುದು ತಾತ್ಕಾಲಿಕವಷ್ಟೇ. ಜಿಲ್ಲಾಡಳಿತ ಸೂಕ್ತ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು.

ಕೇಂದ್ರ ರಾಜ್ಯ ಮತ್ತು ವಿವಿಧ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮದೇ ಪಾತ್ರವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರಾದ ಜಗದೀಶ ನಾಯಕ ಮೊಗಟ, ಸಂಜಯ್ ನಾಯ್ಕ, ಚಂದ್ರಕಾಂತ ನಾಯ್ಕ, ಆಶಾ ನಾಯ್ಕ, ಮಂಕಾಳಿ ಗೌಡ, ಪರ್ಬತ್ ನಾಯ್ಕ, ನಾಗರಾಜ ನಾಯ್ಕ, ಕಾರ್ಯಕರ್ತರು ಜನಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.