ಕಾರವಾರ (KARWAR): ನಗರಸಭೆಗೆ ಸೇರಿರುವ ರಾಜ್ಯದ ಯಾವುದೇ ಊರು ಈ ರೀತಿ ಇಲ್ಲ. ಕಾರವಾರ ನಗರಸಭೆಗೆ(CMC) ಸೇರಿದ ಗುಡ್ಡಳ್ಳಿ ಎಂಬ ಗ್ರಾಮ(GUDDALLI VILLAGE) ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಇಷ್ಟು ವರ್ಷ ಈ ಭಾಗದಿಂದ ವಿಧಾನಸೌಧಕ್ಕೆ(VIDHANASOUDHA) ಹೋದ, ಪಾರ್ಲಿಮೆಂಟ್ (PARLIAMENT) ಹೋಗಿದ್ದ ಜನಪ್ರತಿನಿಧಿಗಳು ಈ ಊರಿನ ಪರಿಸ್ಥಿತಿಗೆ ತಲೆ ಬಾಗಿಸಲೇಬೇಕು. ಯಾಕೆಂದರೆ ಗುಡ್ಡಳ್ಳಿ ಊರಿನ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೀಗಾಗಿ ಇಲ್ಲಿನವರ ಕಷ್ಟ ಮುಂದುವರಿದಿದೆ.
ಊರಿನ 75 ವರ್ಷದ ರಾಮಾ ಗೌಡ ಎಂಬುವವರು ಕಾರವಾರ ತಾಲೂಕಿನ ಶಿರವಾಡಕ್ಕೆ ಬಂದಿದ್ದರು. ಶನಿವಾರ ಕೊಂಚ ಅನಾರೋಗ್ಯ ಉಂಟಾಗಿ ಆಕಸ್ಮಿಕವಾಗಿ ತೀರಿಕೊಂಡರು. ಊರು ಗುಡ್ಡಳ್ಳಿಗೆ ಅವರ ಶರೀರವನ್ನು ತೆಗೆದುಕೊಂಡು ಹೋಗಬೇಕೆಂದರೆ ವಾಹನ ಹೋಗುವುದಿಲ್ಲ. ಬಂದ ಆಂಬುಲೆನ್ಸ್ ಹೈಚರ್ಚ್ ರಸ್ತೆವರೆಗೆ ಮಾತ್ರ ಬಂದು ನಿಂತಿತು. ಹೀಗಾಗಿ ಹಳ್ಳಿಯವರೇ ಮರದ ಕೋಲಿಗೆ ಮೃತದೇಹ ಕಟ್ಟಿ ಒಯ್ಯಬೇಕಾಯಿತು. ನಿತ್ಯವೂ ಈ ಭಾಗದ ಜನರ ಪರಿಸ್ಥಿತಿ ಇದೇ ರೀತಿ ಎಂಬುದು ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕು.
ಗುಡ್ಡಳ್ಳಿ ಊರು ಕಾರವಾರ ನಗರಸಭೆಯ 31 ನೇ ವಾರ್ಡ್ ಗೆ ಸೇರುತ್ತದೆ. ಇಲ್ಲಿ ಒಟ್ಟು ಸುಮಾರು 28 ಕುಟುಂಬಗಳಿವೆ. ಎಲ್ಲರೂ ಬುಡಕಟ್ಟು ಹಾಲಕ್ಕಿ ಸಮುದಾಯದವರು(HALAKKI COMMUNITY). ಕುಟುಂಬದವರು ಒಣ ಕಟ್ಟಿಗೆ ಮಾರಾಟ ಮಾಡಿಯೋ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಗುಡ್ಡಳ್ಳಿಯಿಂದ ಕಾರವಾರಕ್ಕೆ ಬರುವಾಗ ಇದೇ ಕಾಡು ಹಾದಿಯಲ್ಲಿ ನಡೆದು ಬರಬೇಕು.
ತಮ್ಮುರಿನ ಅಗತ್ಯತೆಗಳ ಬಗ್ಗೆ ಹಲವು ಬಾರೀ ಸಂಬಂಧಪಟ್ಟವರಿಗೆ ಮನವಿ ನೀಡಿದ್ದಾರೆ. ಈ ಹಿಂದೆ ಊರಿಗೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಸಮುದಾಯದ ರಮೇಶ್ ಗೌಡ ಎಂಬುವವರು ಅವರಿವರ ಬಳಿ ದುಂಬಾಲು ಬಿದ್ದು ವಿದ್ಯುತ್ ಸಂಪರ್ಕ ಕೊಡಿಸಲು ಯಶಸ್ವಿಯಾಗಿದ್ದರು. ರಸ್ತೆ ಮಾಡಿಸಬೇಕೆಂದು ಒತ್ತಾಯಿಸಿದ್ದರು.
ಇದೀಗ ಜನಪ್ರತಿನಿಧಿಗಳು ಮುಗ್ಧ ಕುಟುಂಬಗಳು ಅನುಭವಿಸುವ ತೊಂದರೆಗಳನ್ನ ಅರಿತು ಸರ್ಕಾರದಿಂದ ಸಮರ್ಪಕವಾದ ರಸ್ತೆ ಮಾಡಿಸುವ ಜವಾಬ್ದಾರಿ ತೋರಿಸಬೇಕು. ಅಂದರೆ ಮಾತ್ರ ಗುಡ್ಡಳ್ಳಿ ಜನರು ಗುಡ್(GOOD) ಹೇಳುವರು. ಇಲ್ಲದಿದ್ದಲ್ಲಿ ನಿಮ್ಮ ಮೇಲಿನ ನಂಬಿಕೆಯನ್ನ ಊರಿನ ಬಗ್ಗೆ ಪ್ರೀತಿ ಇರುವವರೆಲ್ಲರೂ ಕಳೆದುಕೊಳ್ಳಲಿದ್ದಾರೆ ತಿಳಿದಿರಲಿ.
ಇದನ್ನು ಓದಿ : ಕಾರವಾರದಲ್ಲಿ ಆಗರ್ಭ ಶ್ರೀಮಂತನ ಬರ್ಬರ ಹತ್ಯೆ