ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಮಂಗಳೂರು(Manglore) : ನಗರದ ಯೆಮ್ಮೇಕೆರೆ ಕ್ರಾಸ್ ಬಳಿ ಇರುವ ರಾಮ ಲಕ್ಷ್ಮೀ ಸಭಾಭವನದಲ್ಲಿ ಕಾರ್ಯಕ್ರಮವೊಂದರ ವೇಳೆ ಗೋಡೆ ಕುಸಿದು ಬಿದ್ದು ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ.

ಚಿಕಿತ್ಸೆ ಫಲಿಸದೆ ಓರ್ವ ವಿದ್ಯಾರ್ಥಿಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

​ವಿದ್ಯಾರ್ಥಿ ಸಂಘಟನೆಯೊಂದರ ಆಫೀಸ್ ಬೇರರ್‌ಗಳ (ಪದಾಧಿಕಾರಿಗಳ) ಪದಗ್ರಹಣ ಕಾರ್ಯಕ್ರಮಕ್ಕಾಗಿ ಸಭಾಭವನದಲ್ಲಿ ನೂರಾರು ವಿದ್ಯಾರ್ಥಿಗಳು ನೆರೆದಿದ್ದರು. ಹಾಲ್ ಒಳಗಡೆ ಜನದಟ್ಟಣೆ ಹೆಚ್ಚಾಗಿದ್ದರಿಂದ, ಸ್ಥಳಾವಕಾಶವಿಲ್ಲದೆ ಹಲವು ವಿದ್ಯಾರ್ಥಿಗಳು ಹೊರಗಿನ ಕಾರಿಡಾರ್‌ನಲ್ಲಿ ನಿಂತುಕೊಂಡಿದ್ದರು. ​ಈ ವೇಳೆ ಕಾರಿಡಾರ್‌ನಲ್ಲಿದ್ದ ಜಿನ್‌ಸೀ ಶೀಟ್/ಸಪೋರ್ಟಿಂಗ್ ಗೋಡೆಯನ್ನು ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಗಳು ನಿಂತಿದ್ದಾಗ, ದುರ್ಬಲವಾಗಿದ್ದ ಗೋಡೆಯು ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮವಾಗಿ ಗೋಡೆಗೆ ಒರಗಿ ನಿಂತಿದ್ದ ವಿದ್ಯಾರ್ಥಿಗಳು ಕೆಳಗೆ ಬಿದ್ದು ದುರಂತ ಸಂಭವಿಸಿದೆ.

​ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಐವರು ವಿದ್ಯಾರ್ಥಿಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ತೀವ್ರ ಪೆಟ್ಟು ತಾಗಿದ್ದ ಓರ್ವ ವಿದ್ಯಾರ್ಥಿಗೆ ನೀಡಲಾಗುತ್ತಿರುವ ಚಿಕಿತ್ಸೆ ಫಲಿಸದೆ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.