ಕಾರವಾರ(KARWAR) : ಅತ್ಯುತ್ತಮ ಸಂಸದೀಯ ಪಟು ಹಿರಿಯ ಮಾರ್ಕ್ಸವಾದಿ ಚಿಂತಕ, ಸಿಪಿಐಎಂ (CPIM) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಮ ಯೆಚೂರಿ(SEETARAM YECHURI), ಪಶ್ಚಿಮ ಬಂಗಾಳದ(WEST BENGAL) ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ(BUDDADEVA BATTACHARYA), ಒಂಬತ್ತು ಬಾರಿ ಸಿಪಿಐಎಂ ನಿಂದ ಸಂಸದರಾಗಿ ಪ್ರತಿಪಕ್ಷದ ನಾಯಕರಾಗಿದ್ದ ಸಿಐಟಿಯು ಅಖಿಲ ಭಾರತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಾಮ್ರೇಡ್ ಬಸುದೇವ ಆಚಾರ್ಯ, ಸಿಐಟಿಯು ಮಾಜಿ ಉಪಾಧ್ಯಕ್ಷರಾಗಿ ದೇಶದಲ್ಲಿ ಸಂಘಟಿತ ಅಸಂಘಟಿತ ಕಾರ್ಮಿಕ ರ ನಾಯಕರಾಗಿದ್ದ ಎಂ ಎಂ ಲಾರೆನ್ಸ ಇವರಿಗೆ ಕಾರವಾರದ ಸಮಾನ ಮನಸ್ಸಿನ ಪ್ರಗತಿಪರ ಸಂಘಟನೆಗಳು, ಸಿಪಿಐಎಂ, ಸಿಐಟಿಯು(CITU), ಎಸ್.ಎಫ್.ಐ(SFI), ಕೆಪಿಆರ್.ಎಸ್(KPRS), ಪೌರ, ಅಂಗನವಾಡಿ, ಅಕ್ಷರದಾಸೋಹ ನೌಕರರು, ಜನವಾದಿ ಮಹಿಳಾ ಸಂಘಟನೆಗಳ ಪರವಾಗಿ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಆರಂಭದಲ್ಲಿ ಅಗಲಿದವರ ಭಾವಚಿತ್ರಗಳೊಂದಿಗೆ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಗರದ ಸುಭಾಸ್ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಸಮಾಜಸೇವಕರು, ಕಸಾಪ ಪದಾಧಿಕಾರಿಗಳು ಆದ ಬಾಬು ಶೇಖ್ ಕಾರವಾರದ ನಾಗರಿಕರ ಪರವಾಗಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದೇಶ ಕಂಡ ಮಹಾನ್ ಪ್ರಜಾಪ್ರಭುತ್ವ ವಾದಿ ಹಾಗೂ ಸಂವಿಧಾನದ ಆಶಯಗಳಂತೆ ಬಹುತ್ವ ಭಾರತಕ್ಕಾಗಿ ಜೀವನಪರ್ಯಂತ ಶ್ರಮಿಸಿದ ಕಾಮ್ರೇಡ್ ಸೀತಾರಾಮ ಯೆಚೂರಿ ಯವರಿಗೆ ಮತ್ತು ಬುದ್ಧದೇವ ಭಟ್ಟಾಚಾರ್ಯ ಇತರ ಹಿರಿಯರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ನಮ್ಮ ಜನತೆಯ ಎಲ್ಲಾ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ಪಣ ತೊಡುವುದು ಮತ್ತು ಅದರಂತೆ ಬದುಕುವುದೇ ನಿಜವಾದ ಶ್ರದ್ಧಾಂಜಲಿ. ಭಾರತದಲ್ಲಿ ಮನುಷ್ಯತ್ವ ಪ್ರತಿಪಾದಕರನ್ನು ಸೇರಿಸಿ ಇಂಡಿಯಾ ತಂಡ ರಚಿಸುವಲ್ಲಿ ಸೀತಾರಾಮ ಯೆಚೂರಿಯವರ ಪಾತ್ರ ಹಿರಿದಾದುದು. ಸದಾ ಬಡಜನತೆಯ ಸಲುವಾಗಿ ಸಂಸತ್ತಿನಲ್ಲಿ, ಅಧಿಕಾರಸ್ಥ ಸ್ಥಳದಲ್ಲಿ ಹಾಗೂ ಬೀದಿಯಲ್ಲಿಯೇ ಹೋರಾಟದಲ್ಲಿರುತ್ತಿದ್ದ ಈ ಹಿರಿಯರಿಗೆ ನಾವು ಕಾರವಾರದ ನಮ್ಮೆಲ್ಲ ಒಡನಾಡಿಗಳ ಪರವಾಗಿ ಈ ಸುಭಾಷ್ ವೃತ್ತದಲ್ಲಿ ಅತ್ಯಂತ ಗೌರವದಿಂದ ಬಹಿರಂಗ ಸಭೆ ನಡೆಸಿ ಕೆಂಪು ನಮನವನ್ನು ಸಲ್ಲಿಸುವುದು ಅರ್ಥಪೂರ್ಣವಾಗಿದೆ ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಅಗಲಿದ ಎಲ್ಲಾ ಹಿರಿಯ ಚೇತನಗಳ ಹೋರಾಟಗಳನ್ನು ಪರಿಚಯಿಸುತ್ತಾ, ಈ ದೇಶದ ಸಾಮಾಜಿಕ ಆರ್ಥಿಕ ರಾಜಕೀಯ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಬೆಳವಣಿಗೆಗೆ ಮತ್ತು ಬದಲಾವಣೆಗೆ ತ್ಯಾಗದ ಮೂಲಕ ಶ್ರಮಿಸಿದವರು. ಸೀತಾರಾಮ ಯೆಚೂರಿ, ಬುದ್ಧದೇವ ಭಟ್ಟಾಚಾರ್ಯ, ಬಸುದೇವ ಆಚಾರ್ಯ ಹಾಗೂ ಎಂ ಎಂ ಲಾರೆನ್ಸ್ ಮುಂತಾದವರು. ಇವರ ಅಗಲಿಕೆ ಕೇವಲ ಸಿಪಿಐಎಂ ಅಥವಾ ಎಡ ಪಕ್ಷಗಳಿಗೊಂದೇ ನಷ್ಟವಲ್ಲ, ಪ್ರಜಾಪ್ರಭುತ್ವ ಚಳುವಳಿಗೂ ಬಡಜನತೆಯ ಆಶೋತ್ತರ ಈಡೇರಿಕೆಗೂ ನಷ್ಟವಾಗಿದೆ. ಅಪಾಯದಲ್ಲಿರುವ ಸಂವಿಧಾನದ ರಕ್ಷಣೆಗಾಗಿ ಜೊತೆಗೆ ರೈತರ ಭೂಮಿ ಹಕ್ಕು, ಬೆಂಬಲ ಬೆಲೆಗಾಗಿ, ಕಾರ್ಮಿಕರ ಕೂಲಿಕಾರರ ಘನತೆಯ ಬದುಕಿಗೆ ಕೂಲಿ, ಸಾಮಾಜಿಕ ಸೌಲಭ್ಯ ಗಳಿಗಾಗಿ, ಮಹಿಳೆಯರನ್ನು ಅಲ್ಪಸಂಖ್ಯಾತರನ್ನು ಆದಿವಾಸಿಗಳನ್ನು ಬಾಧಿಸುವ ಸಂಕಷ್ಟ ವಿಮೋಚನೆಗಾಗಿ ಇವರ ಕೊಡುಗೆ ಅಪಾರ ಎಂದರು.
ನಗರಸಭೆಯ ಸ್ಥಾಯಿ ಸಮಿತಿ ಮಾಜಿ ಚೇರಮನ್ ವಿಠ್ಠಲ ಸಾವಂತ, ಮಾಜಿ ನಗರ ಸಭಾ ಸದಸ್ಯರಾದ ರಾಜೇಂದ್ರ ಅಂಚೇಕರ್, ಸಿಜೆ ನಾಯ್ಕ, ಓಂಕಾರ ಗುನಗಿ, ಜನಶಕ್ತಿ ಸಂಘಟನೆ ಪರವಾಗಿ ಸೂರಜ್ ಕೂರ್ಮಕರ್, ಮಾಯಾ ಕಾಣೇಕರ್ ಉಪಸ್ಥಿತರಿದ್ದರು.
ಸಿಐಟಿಯು ತಾಲೂಕು ಸಂಚಾಲಕಿ ಮಂಜುಳಾ ಕಾಣಕೋಣಕರ್ ಪ್ರಾಸ್ತಾವಿಕ ಮಾತನಾಡಿ ನಿರ್ವಹಿಸಿದರು. ಸಿಐಟಿಯುನ ತಾರಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಫ್.ಐ ನ ಶೇಕಪ್ಪ ವಂದಿಸಿದರು.
ಇದನ್ನು ಓದಿ : ಪ್ರಯಾಣಿಕರ ಗಮನಕ್ಕೆ. ಯಶವಂತಪುರದಿಂದ ಕಾರವಾರಕ್ಕೆ ಎಕ್ಸ್ಪ್ರೆಸ್ ರೈಲು.