ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) : ಕಾಂಗ್ರೆಸ್ ಮುಖಂಡ (Congress Leader) ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರ ಮೇಲೆ ಪ್ರತಿದಾಳಿ ಮಾಡುತ್ತಿದ್ದ ವೇಳೆ ಆರೋಪಿ ಕಾಲಿಗೆ ಗುಂಡೇಟು ನೀಡಿದ ಘಟನೆ ನಡೆದಿದೆ.
ಈಗಾಗಲೇ ಜಿಲ್ಲೆಯ ಪ್ರಮುಖ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ನಾಕಾಬಂದಿ ನಡೆಸಿ ವಾಹನಗಳ ತಪಾಸಣೆ ಕೈಗೊಳ್ಳಲಾಗಿದೆ. ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಬೈಂದೂರಿನ ಒತ್ತಿನಣೆಯಲ್ಲಿ(Bynduru Ottinene) ಮೂವರು ಶಂಕಿತ ಆರೋಪಿಗಳು ಪತ್ತೆಯಾಗಿದ್ದರು ಎನ್ನಲಾಗಿದೆ. ಈ ವೇಳೆ ಪ್ರಮುಖ ಆರೋಪಿ ರಾಜು ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದಾಗ, ಆತ್ಮರಕ್ಷಣೆಗಾಗಿ ಎಸ್‌ಐ ತೇಜಸ್ವಿ ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡೇಟು ರಾಜುವಿನ ಕಾಲಿಗೆ ತಗುಲಿದೆ.
ಕಾಲಿಗೆ ಗುಂಡೇಟು ತಗುಲಿರುವ ರಾಜು ಉತ್ತರಪ್ರದೇಶ(Uttarpradesha) ಮೂಲದವನು ಎನ್ನಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಆರೋಪಿಗಳೂ ಉತ್ತರ ಭಾರತೀಯರು(North India) ಎನ್ನಲಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಇನ್ನುಳಿದ ಆರೋಪಿಗಳು ಪೊಲೀಸರ ಕೈಗೆ ಸಿಗುವ ಸಾಧ್ಯತೆ ಇದೆ
ಡೇವಿಡ್ ಡಿಸೋಜಾ ಅವರ ಹತ್ಯೆಗೆ ಸುಪಾರಿ ನೀಡಿದವರು ಯಾರು? ಕೊಲೆಯ ಹಿಂದಿನ ನಿಜವಾದ ಕಾರಣವೇನು? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಶಾಂತ ಕರಾವಳಿಯಲ್ಲಿ ಸರಣಿ ಶೂಟೌಟ್; ಬೆಚ್ಚಿಬಿದ್ದ ಉಡುಪಿ
ಇತ್ತೀಚಿನ ದಿನಗಳಲ್ಲಿ ಉಡುಪಿ(Udupi) ಜಿಲ್ಲೆಯಲ್ಲಿ ನಡೆದಿರುವ ಎರಡು ಗುಂಡಿನ ದಾಳಿ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಕುಂದಾಪುರದಲ್ಲಿ(Kundapur) ಐವನ್ ರಿಚರ್ಡ್ ಮಸ್ಕರೇನಸ್ ಹತ್ಯೆಯ ಬೆನ್ನಲ್ಲೇ ಶಿರ್ವದಲ್ಲಿ(Shirva) ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಮೇಲೆ ಗುಂಡಿನ ದಾಳಿ ನಡೆದಿರುವುದು ಕರಾವಳಿಯಲ್ಲಿ ಚರ್ಚೆಗೆ ಕಾರಣವಾಗಿದೆ.
ಎರಡೂ ಪ್ರಕರಣಗಳಲ್ಲೂ ಗುಂಡಿನ ದಾಳಿಯಿಂದ ಸಾವು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಹಾಗೂ ಹಳೆಯ ವೈಷಮ್ಯದ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಂತಕರ ಪತ್ತೆ ಹಾಗೂ ಶೂಟೌಟ್ ಪ್ರಕರಣಗಳ ಹಿಂದಿರುವ ಜಾಲವನ್ನು ಭೇದಿಸಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕರಾವಳಿಯ ಶಾಂತಿ(Peace Karavali), ಸೌಹಾರ್ದತೆಗೆ ಧಕ್ಕೆ ತರುವಂತಹ ಇಂತಹ ಕೃತ್ಯಗಳ ಹಿಂದೆ ಅಕ್ರಮ ಶಸ್ತ್ರಾಸ್ತ್ರಗಳ ಜಾಲ ಅಥವಾ ಸಂಘಟಿತ ಅಪರಾಧ ಚಟುವಟಿಕೆಗಳಿವೆಯೇ ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಅಪರಾಧಿಗಳಿಗೆ ಪೊಲೀಸರ ಭಯವೇ ಇಲ್ಲವೇ? ಉಡುಪಿ ಜಿಲ್ಲೆ ಅಪರಾಧ ಕೃತ್ಯಗಳಿಗೆ ವೇದಿಕೆಯಾಗುತ್ತಿದೆಯೇ? ಕರಾವಳಿಯಲ್ಲಿ ಮತ್ತೆ ಗನ್ ಸಂಸ್ಕೃತಿ ತಲೆದೋರಿದೆಯೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.
ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಪಡಿಸುವುದು, ಅಕ್ರಮ ಶಸ್ತ್ರಾಸ್ತ್ರಗಳ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ಶೂಟೌಟ್ ಪ್ರಕರಣಗಳ ತ್ವರಿತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಅಗತ್ಯವಿದೆ ಎಂಬ ಆಗ್ರಹ ವ್ಯಕ್ತವಾಗಿದೆ.
ಕರಾವಳಿಯ ಶಾಂತಿಗೆ ಧಕ್ಕೆ ತರುವ ದುಷ್ಕೃತ್ಯಗಳನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಠಿಣವಾಗಿ ಹತ್ತಿಕ್ಕಿ, ಜನರಲ್ಲಿ ಭದ್ರತೆಯ ವಿಶ್ವಾಸವನ್ನು ಮರುಸ್ಥಾಪಿಸುವುದು ಇದೀಗ ದೊಡ್ಡ ಸವಾಲಾಗಿದೆ.
