ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಹೊನ್ನಾವರ(Honnavar) : ತಾಲೂಕಿನ ಹೆರಂಗಡಿಯಲ್ಲಿ ಅಕ್ರಮವಾಗಿ ಕಟ್ಟಿಹಾಕಲಾಗಿದ್ದ ಏಳು ಹೋರಿ ಕರುಗಳನ್ನು ಕುಮಟಾ ಮತ್ತು ಹೊನ್ನಾವರ ಪೊಲೀಸರು(Kumta and Honnavar Police) ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಹೆರಂಗಡಿ ನಿವಾಸಿ ಅಭಿದಿನ್ ಅಹ್ಮದ್ ಕಟ್ಟಪ್ಪರಸ್ ಎಂಬವರ ಮನೆ ಹತ್ತಿರ ಈ ಏಳು ಹೋರಿ ಕರುಗಳು ಪತ್ತೆಯಾಗಿವೆ. ಮಾಂಸಕ್ಕಾಗಿ ಹಾಗೂ ವಧೆಯ ಉದ್ದೇಶದಿಂದಲೇ ಈ ಕರುಗಳನ್ನು ಬೇರೆಡೆಗಳಿಂದ ಕದ್ದು ತಂದು ಇಲ್ಲಿ ಅಕ್ರಮವಾಗಿ ಬಂಧಿಸಿಡಲಾಗಿತ್ತು ಎಂದು ಶಂಕಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದ ವೇಳೆಗೆ ಮುಖ್ಯ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ರಕ್ಷಿಸಲಾದ ಎಲ್ಲಾ ಏಳು ಹೋರಿ ಕರುಗಳನ್ನು ಸುರಕ್ಷಿತವಾಗಿ ಸಮೀಪದ ಗೋಶಾಲೆಗೆ ರವಾನಿಸಲಾಗಿದೆ.
ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ (Honnavar Police Station) ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.