ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ದಾಂಡೇಲಿ(Dandeli): ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಪ್ರಸಿದ್ಧ ವೆಸ್ಟ್ ಕೋಸ್ಟ್ ಪೇಪರ್ ಮಿಲ್ (WCPM) ಆವರಣದಲ್ಲಿ ಕಪ್ಪು ಚಿರತೆ (Black Panther) ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರು ಹಾಗೂ ಕಂಪನಿಯ ನೌಕರರಲ್ಲಿ ಆತಂಕವನ್ನುಂಟುಮಾಡಿದೆ.
ಬೆಳಗಿನ ಜಾವ ಸುಮಾರು 4:30ರ ವೇಳೆಗೆ ಕಂಪನಿಯ ಜನರಲ್ ಆಫೀಸ್ ಮುಂಭಾಗದಲ್ಲಿ ಕರಿ ಚಿರತೆಯೊಂದು(Black Panther) ರಾಜಾರೋಷವಾಗಿ ಓಡಾಡಿದೆ. ನೌಕರರು ಹಾಗೂ ಸಾರ್ವಜನಿಕರು ನಿತ್ಯ ಸಂಚರಿಸುವ ಜಾಗದಲ್ಲೇ ಚಿರತೆ ಪ್ರತ್ಯಕ್ಷಗೊಂಡಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.
ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ: ಕಂಪನಿಯ ಆವರಣದ ಸಿಸಿಟಿವಿ ಕೆಮರಾಗಳಲ್ಲಿ ಕಪ್ಪು ಚಿರತೆಯ ಸಂಚಾರದ ದೃಶ್ಯ ಸಂಪೂರ್ಣವಾಗಿ ಸೆರೆಯಾಗಿದೆ. ಬೆಳಗಿನ ಜಾವದ ಪಾಳಿಯಲ್ಲಿ ಕೆಲಸಕ್ಕೆ ಆಗಮಿಸುವ ಮತ್ತು ಕೆಲಸ ಮುಗಿಸಿ ತೆರಳುವ ನೌಕರರು ಈ ದೃಶ್ಯ ಕಂಡು ಆತಂಕಕ್ಕೊಳಗಾಗಿದ್ದಾರೆ.
ಜನವಸತಿ ಪ್ರದೇಶಗಳಿಗೂ ಲಗ್ಗೆ: ಕಳೆದ ಕೆಲವು ತಿಂಗಳುಗಳಿಂದ ದಾಂಡೇಲಿ(Dandeli) ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಈಗ ಅವುಗಳು ಜನವಸತಿ ಹಾಗೂ ಕೈಗಾರಿಕಾ ಪ್ರದೇಶಗಳತ್ತ ಮುಖ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಡಿನಿಂದ ನಾಡಿನತ್ತ ಬರುವ ಚಿರತೆಗಳು ಸಾರ್ವಜನಿಕರಿಗೆ ಹಾಗೂ ಸಾಕುಪ್ರಾಣಿಗಳಿಗೆ ಕಂಟಕವಾಗಿ ಪರಿಣಮಿಸಿವೆ.
ಕಂಪನಿಯ ಆವರಣದಲ್ಲಿ ಹಾಗೂ ನಗರದ ಸುತ್ತಮುತ್ತ ಚಿರತೆ ಸಂಚಾರ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆ(Forest Department) ತಕ್ಷಣವೇ ಕಾರ್ಯಾಚರಣೆ ನಡೆಸಿ, ಬ್ಲ್ಯಾಕ್ ಪ್ಯಾಂಥರ್ ಅನ್ನು ಬೋನು ಮುಖಾಂತರ ಸೆರೆಹಿಡಿದು ದಟ್ಟ ಅರಣ್ಯಕ್ಕೆ ಬಿಡಬೇಕೆಂದು ಸಾರ್ವಜನಿಕರು ಹಾಗೂ ಮಿಲ್ ನೌಕರರು ಆಗ್ರಹಿಸಿದ್ದಾರೆ.