ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ಗಡಿನಾಡು ಕರಾವಳಿಯ ಕಾರವಾರ ತಾಲೂಕಿನ ಕದ್ರಾದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ. ಇಲ್ಲಿನ ಶಕ್ತಿ ದೇವತೆ ಶ್ರೀಮಹಮ್ಮಾಯಿ (Kadra Sri Mahamaya Temple) ದೇವರ ಜಾತ್ರಾ ಮಹೋತ್ಸವ ಇದೇ ನವೆಂಬರ್ 14 ರಂದು ಅದ್ದೂರಿಯಾಗಿ ನಡೆಯಲಿದೆ.

ಶಿಂಗೆವಾಡಿಯಲ್ಲಿ(Shingewadi) ನಿತ್ಯ ಪೂಜೆ ಪಡೆಯೋ ದೇವಿಗೆ ಅದ್ದೂರಿಯ ಉತ್ಸವ ನಡೆಸಲಾಗುತ್ತಿರುವುದು ವಿಶೇಷವಾಗಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಹೀಗೆ ಮೂರು ರಾಜ್ಯಗಳ ಭಕ್ತರ (Devotees) ಸಮಾಗಮವಾಗಲಿದೆ.
ಪಾಂಡವ ಪಂಚಮಿ ತಿಥಿಯಂದು ನಡೆಯುವ ಶ್ರೀಮಹಮ್ಮಾಯಿ ದೇವಿಯ ಜಾತ್ರೆಗೆ(Sri Mahammayi Devi Jaatra) ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ವಿಶೇಷ ಅಂದರೆ ಮಹಮ್ಮಾಯಿ ದೇವಿಯ ಮೂಲ ಸ್ಥಾನವಾಗಿರುವ ಶಿಂಗೆವಾಡಿಯಲ್ಲಿ ಈ ದೇವಿಯು ನಿತ್ಯ ಪೂಜೆ ಪಡೆಯುತ್ತಾಳೆ.
ಇಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇವಿಯನ್ನು ಪಲ್ಲಕ್ಕಿಯಲ್ಲಿ ಹೊತ್ತುತಂದು ಜಾತ್ರೆ ಕಟ್ಟೆಯ ಮೇಲೆ ಕೂರಿಸಿ, ಭತ್ತದ ಕದಿರು ಹಾಗೂ ಬಂಗಾರದ ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಕದ್ರಾ ಸುತ್ತಮುತ್ತಲಿನ ಹಾಗೂ ವಿವಿಧ ಭಾಗಗಳ ಸಾವಿರಾರು ಭಕ್ತರು ಈ ಜಾತ್ರೆಗೆ ಆಗಮಿಸುತ್ತಾರೆ.

ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಕದ್ರಾದ ದೇವಾಲಯದಲ್ಲಿ ದೇವಿಯನ್ನ ಜಾತ್ರೆ ದಿವಸ ಮುಂಜಾನೆ ಪಲ್ಲಕ್ಕಿಯಲ್ಲಿ ತಂದು ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲಿಂದ ಕದ್ರಾದ ದೇವಾಲಯದಲ್ಲಿ(Kadra Temple) ಜಾತ್ರಾ ಸಂಭ್ರಮ ಕಳೆಕಟ್ಟುತ್ತದೆ. ಗಡಿ ಭಾಗವಾಗಿದ್ದರಿಂದ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಹಸ್ರಾರು ಭಕ್ತರು ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ.

ಮಹಿಳೆಯರಿಂದ ವಿಶೇಷ ಉಡಿ ಕಾಣಿಕೆ ಸೇವೆ: ಈ ಮಹಮ್ಮಾಯಿ ಮಿರಾಶಿ ಮನೆತನದವರ ಮನೆದೇವರಾಗಿದ್ದು, ಅವರೇ ಮುಂದಾಳತ್ವ ವಹಿಸಿಕೊಂಡು ಜಾತ್ರೆ ನಡೆಸೋದು ಸಂಪ್ರದಾಯ. ದೇವಿಗೆ ಮುಖ್ಯವಾಗಿ ತುಲಾಭಾರ ಸೇವೆ ನಡೆದು, ಮಹಿಳೆಯರು ದೇವಿಗೆ ಉಡಿ ಕಾಣಿಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇಲ್ಲಿ ಬೇಡಿ ಬಂದವರಿಗೆ ದೇವಿ ಅಭಯ ನೀಡುತ್ತಾಳೆ. ದೇವಿಯ ಮುಂದೆ ನಿಂತು ಪ್ರಾರ್ಥನೆ ಮಾಡಿಕೊಂಡರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.
ಭೂಮಿ ಸಮಸ್ಯೆಯಾಗಿರಬಹುದು, ಸಂತಾನದ ಬೇಡಿಕೆ, ಆರೋಗ್ಯ, ಮದುವೆ, ಉದ್ಯೋಗ ಹೀಗೆ ಹಲವು ಕಾರ್ಯಗಳಿಗಾಗಿ ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಇಷ್ಟಾರ್ಥ ಸಿದ್ದಿಯಾದ ಮೇಲೆ ದೇವರಿಗೆ ಭಕ್ತರು ಸೇವೆ ಸಲ್ಲಿಸುತ್ತಾರೆ.
ಉತ್ತರಕನ್ನಡ(Uttarkannada) ಜಿಲ್ಲೆಯ ಕಾರವಾರ(Karwar) ತಾಲೂಕಿನಲ್ಲಿ ವಾರ್ಷಿಕವಾಗಿ ನಡೆಯುವ ಜಾತ್ರೆಗಳಲ್ಲಿ ಶ್ರೀಮಹಮ್ಮಾಯಿ ದೇವಿಯ(Sri Mahammayi Devi) ಉತ್ಸವವು ಮೊದಲನೆಯ ಜಾತ್ರೆಯಾಗಿದೆ. ಹೀಗಾಗಿ ಗಡಿ ಭಾಗದಲ್ಲಿ ನಡೆಯೋ ಈ ಜಾತ್ರೆಯು ವಿಶೇಷ ಮಹತ್ವ ಪಡೆದುಕೊಂಡಿದೆ.
ನವೆಂಬರ್ 14 ರಂದು ಶನಿವಾರ ಶಕೆ 1948ರ ಪರಾಭವನಾಮ ಸಂವತ್ಸರದ ಪಾಂಡವ ಪಂಚಮಿಯಂದು ಜರುಗುವ ಶ್ರೀ ಮಹಾಮಾಯಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಶ್ರೀ ಮಹಾಮಾಯಾ ದೇವಸ್ಥಾನ, ಕದ್ರಾ ಭಕ್ತ ಮಂಡಳಿಯ ವತಿಯಿಂದ ಕೋರಿಕೊಳ್ಳಲಾಗಿದೆ.