ಭಟ್ಕಳ: ತಾಲೂಕಿನ ಗ್ರಾಮೀಣ ಪ್ರದೇಶದ ನಾಗರಿಕರ ಆರಾಧ್ಯ ದೈವ ಮಾರಿಕಾಂಬಾ ಜಾತ್ರೆಗೆ ಇಂದು ಅದ್ದೂರಿಯ ಚಾಲನೆ ನೀಡಲಾಯಿತು.
ಬೆಳಕೆ ಗರಡಿ ಹಿತ್ಲುವಿನ ಶ್ರೀಧರ ನಾಯ್ಕ ಮನೆಯಲ್ಲಿ ಮಾರಿ ಮರಕ್ಕೆ ಪೂಜೆ ಸಲ್ಲಿಸಿ ಮರ ಕತ್ತರಿಸುವ ಮೂಲಕ ಮಾರಿ ಜಾತ್ರೆಯ ಮೂರ್ತಿ ಕೆತ್ತನೆಯ ಧಾರ್ಮಿಕ ವಿಧಿ ವಿಧಾನಕ್ಕೆ ನಾಂದಿ ಹಾಡಲಾಯಿತು.
ದೇವಸ್ಥಾನದ ಆಡಳಿತ ಕಮಿಟಿ ಮುಖ್ಯಸ್ಥರು ಒಳಗೊಂಡಂತೆ ಸ್ಥಳೀಯರು ಹಾಗೂ ಮರವನ್ನು ನೀಡಿದ ಕುಟುಂಬದವರ ಸಮ್ಮುಖದಲ್ಲಿ ಮಾರಿ ಮೂರ್ತಿ ತಯಾರಿಕರಾದ ಮಾರುತಿ ಆಚಾರಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮರವನ್ನು ಕತ್ತರಿಸಿ ಮೂರ್ತಿ ತಯಾರಿಗೆ ಸಿದ್ಧತೆ ಮಾಡಿಕೊಂಡರು.
ಸುಮಾರು 25 ವರ್ಷದ ಹುಳಿ ಅಮಟೆ ಮರ ಇದಾಗಿದೆ. ವರ್ಷ ಪತ್ರಿಯಂತೆ ಇಲ್ಲಿನ ಮಣ್ಕುಳಿಯ ಹೊನ್ನಯ್ಯನ ಮನೆ ಕುಟುಂಬಸ್ಥರು ಈ ಮರವನ್ನು ಕಡಿದು ಮಾರಿ ಮೂರ್ತಿ ತಯಾರಕರಾದ ಆಚಾರರಿಗೆ ನೀಡುವುದು ವಾಡಿಕೆ. ಬಳಿಕ ಇಂದಿನಿಂದ ಶುಕ್ರವಾರ ತನಕ ಮಾರಿ ಮೂರ್ತಿ ಬಿಂಬವನ್ನು ಅಲ್ಲಿಯ ತಯಾರಿಸಿ ಬಳಿಕ ಶುಕ್ರವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿ ಊರಿನ ಮುತೈದೆಯರು ಮೂರ್ತಿಗೆ ಉಡಿ ತುಂಬಿ ಸಂಪ್ರದಾಯಬದ್ದವಾಗಿ ಮಾರಿ ಮೂರ್ತಿ ತಯಾರಿಗೆ ಸಿದ್ಧಗೊಳ್ಳುತ್ತದೆ. ನಂತರ ಅಲ್ಲಿಂದ ಮೂರ್ತಿ ತಯಾರಿಕೆ ಕೆಲಸವನ್ನು ಆಚಾರ್ಯರ ಮನೆಯಲ್ಲಿ ಮಾರ್ಚ್ 30 ತನಕ ನಡೆಯಲಿದೆ.
ಮಂಗಳವಾರದಂದು ರಾತ್ರಿ ಮೂರ್ತಿ ತಯಾರಕ ವಿಶ್ವಕರ್ಮ ಸಮಾಜದವರಿಂದ ತವರು ಮನೆಯ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಆ ಬಳಿಕ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ ಪೂಜೆಯೂ ಸಹ ನಡೆಸಲಾಗುವುದು. ಪೂಜಾ ಸಮಯದಲ್ಲಿ ಅವರ ಸಮಾಜದ ಮಹಿಳೆಯರೊಬ್ಬರ ಮೇಲೆ ಮಾರಿ ದೇವಿ ಬರುತ್ತಾಳೆಂಬ ನಂಬಿಕೆ ಇದೆ. ನಂಬಿಕೆಯಂತೆ ಪೂಜೆಯ ವೇಳೆ ಮೈ ದರ್ಶನ ನಡೆಯುತ್ತದೆ. ನಂತರ ಮಹಾ ಮಂಗಳಾರತಿ ಪೂಜೆ ನಡೆಸಿ ಬುಧವಾರದಂದು ಮುಂಜಾನೆ 5.30 ಗಂಟೆಗೆ ಮಾರಿ ದೇವಿಯನ್ನು ವಿಶ್ವಕರ್ಮ ಸಮಾಜದವರು ಅದ್ದೂರಿ ಮೆರವಣಿಗೆಯ ಮೂಲಕ ಇಲ್ಲಿನ ಪೇಟೆ ರಸ್ತೆಯಲಿರುವ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಸಕಲ ಸಂಭ್ರಮದಿಂದ ವಿಶೇಷ ಆಕರ್ಷಣೆ, ಚಂಡೆ ವಾದ್ಯ, ನೃತ್ಯ ಕುಣಿತದೊಂದಿಗೆ ಮೆರವಣಿಗೆ ಮೂಲಕ ಒಯ್ಯಲಾಗುತ್ತದೆ..
ನಂತರ ಮಾರಿಕಾಂಬಾ ದೇವಿಯ ಎದುರಿಗೆ ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಿ ಪೂಜಾ ಕೌಂಕರ್ಯಗಳನ್ನು ನಡೆಸಲಾಗುವದು. ಆ ಮೂಲಕ ಎರಡು ದಿನಗಳ ಮಾರಿ ಜಾತ್ರಾ ಮಹೋತ್ಸವವೂ ಮಾರಿಗದ್ದುಗೆಯಲ್ಲಿ ಮಾರಿ ಮೂರ್ತಿಯನ್ನು ಪ್ರತಿಷ್ಟಾಪಿಸುವ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ.