ಕಾರವಾರ : ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ 8ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿ ಪ್ರೇಮಾ ಟಿ.ಎಂ.ಆರ್. ಸರ್ವಾಧ್ಯಕ್ಷತೆಯಲ್ಲಿ ಅದ್ದೂರಿಯಿಂದ ಜರುಗಿತು.

ಸಮ್ಮೇಳನವನ್ನ  ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಎಂ.ಜಿ. ಹೆಗಡೆ  ಉದ್ಘಾಟಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಸಾಹಿತಿ ಪ್ರೇಮಾ ಟಿ.ಎಂ.ಆರ್ ಮಾತನಾಡಿ, ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಪ್ರಾಥಮಿಕ ಶಿಕ್ಷಣ ಏಕ ರೀತಿ, ಏಕ ಭಾಷೆ ಎಂಬ ನೀತಿ ಕಾನೂನು ಬದ್ಧವಾಗಲಿ. ಎಂದರು. ಈ ವಿಚಾರವಾಗಿ ದೊಡ್ಡ ಮಟ್ಟದ ಹೋರಾಟದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಹಿರಿಯ ಸಾಹಿತಿ ಜಮೀರುಲ್ಲಾ ಶರೀಫ್ ಮಾತನಾಡಿ, ನನ್ನ ಮಾತೃಭಾಷೆ ಉರ್ದು ಆದರೂ , ಕನ್ನಡ ನಮ್ಮ ‘ನಾಡಿ ಭಾಷೆ’ ಆಗಿದೆ ಎಂದರು.  ಹಾಗಾಗಿ ನಾಡ ಭಾಷೆ ಧ್ವೇಷ ಮಾಡಬಾರದು. ಪುಸ್ತಕ ಓದುವವರ ಸಂಖ್ಯೆ ವಾಟ್ಸಾಪ್ ಸಾಹಿತ್ಯಕ್ಕೆ ವರ್ಗಾವಣೆ ಆಗಿದೆ. ಕನ್ನಡ ಇತಿಹಾಸದ ಎಲ್ಲ ಧರ್ಮ ಸಾಹಿತ್ಯಗಳು ಮನುಷ್ಯ ಧರ್ಮವನ್ನು ಪ್ರತಿಪಾದಿಸಿದೆ. ಈಗ ಅಂಥ ಸಾಹಿತ್ಯ ರಚಿಸುವ ಸಾಹಿತಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ದ್ವಾರಗಳನ್ನು ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬೊಮ್ಮಯ್ಯ ವಾಸರೆ, ಕಸಾಪ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಹೋರಾಟಗಾರ ಮಾಧವ ನಾಯ್ಕ, ಗಣಪತಿ ಮಾಂಗ್ರೆ ಮತ್ತಿತರರು ಇದ್ದರು. ಕನ್ನಡ ಸಾಹಿತ್ಯ ಪರಿಷತ್ ಕಾರವಾರ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಗಣೇಶ ಭಿಷ್ಠಣ್ಣವರ ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಭಾಷಣ ಮತ್ತು ನಾಡಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು ನಡೆಯಿತು. ಹಿರಿಕಿರಿಯ ಸಾಹಿತಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಂಜೆ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ್ ಎಂ ಉಪಸ್ಥಿತರಿದ್ದು ಡಾ ರಾಜಕುಮಾರ್ ಅವರ ಹಾಡು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನ ಸನ್ಮಾನಿಸಲಾಯಿತು.

ಇದನ್ನು ಓದಿ : ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಲೋಕಾ ಬಲೆಗೆ

ಉದ್ಯೋಗ ವಂಚನೆ ಕಾರವಾರ ಮಹಿಳೆ ಬಂಧನ

ಶಿರಸಿಯಲ್ಲಿ ಜಿಂಕೆ ಬೇಟೆಯಾಡಿದವರ ಬಂಧನ