ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ (Newdelhi):  ತಾಂತ್ರಿಕ ಕಾರಣಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ  ವಿಜ್ಞಾನಿ, ಗಗನಯಾತ್ರಿ ಬುಚ್‌ ವಿಲ್ಮೋರ್ ಅವರು   ಬಾಹ್ಯಾಕಾಶ ವಾಸ ಮುಗಿಸಿ   ಸುರಕ್ಷಿತವಾಗಿ ಭೂಮಿಗೆ ವಾಪಾಸಾಗಿದ್ದಾರೆ. 
ಐಎಸ್‌ಎಸ್‌ ಕ್ರೂ-9 ಸದಸ್ಯರನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆ ಫ್ಲೋರಿಡಾದ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಿತು. ಕ್ರೂ-9 ಮಾರ್ಚ್ 18, 2025ರಂದು ಬೆಳಗ್ಗೆ 10:35ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ ಕಡೆಗೆ ಪ್ರಯಾಣ ಪ್ರಾರಂಭಿಸಿತು. ಅದಾದ ನಂತರ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಯಿತು.

ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಬರುವುದು ವಿಳಂಬವಾಗಿತ್ತು. ಕೇವಲ ಒಂದು ವಾರದ ಮಟ್ಟಿಗೆ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಪ್ರಯಾಣಿಸಿದ್ದರು. ಆದರೆ, ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನೀತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು. ಹೀಗಾಗಿ ಅವರ ವಾಸ  9 ತಿಂಗಳಿಗೆ ವಿಸ್ತರಣೆಗೊಂಡಿದ್ದವು. ಇದೀಗ ಇಬ್ಬರೂ ಸುರಕ್ಷಿತವಾಗಿ ಮರಳಿರುವುದರಿಂದ ಕೊನೆಗೊಂಡಿದೆ.

ಕೆಲ ದಿನಗಳ ಕಾಲ ಕ್ವಾರೆಂಟೈನ್ : ಅಂತರಿಕ್ಷದಿಂದ ಬರುವ ಗಗನಯಾನಿಗಳನ್ನು ವಾರಗಳ ಕಾಲ, ಕೆಲವೊಮ್ಮೆ ತಿಂಗಳುಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಿ ತಪಾಸಣೆ ನಡೆಸಲಾಗುತ್ತಿರುವುದರಿಂದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಈ ಹಿಂದೆ ಚಂದ್ರನ ಮೇಲೆ ಕಾಲಿಟ್ಟು ಭೂಮಿಗೆ ಮರಳಿದ ನೀಲ್‌ ಆಮ್‌ರ್‍ಸ್ಟ್ರಾಂಗ್‌ ಈ ಹಿಂದೆ ಕ್ವಾರಂಟೈನ್‌ನಲ್ಲಿ ತಮ್ಮ 39ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಮನುಷ್ಯನ ಜ್ಞಾನ, ಕಲ್ಪನೆಗೂ ಮೀರಿದ ಸೂಕ್ಷ್ಮಾಣುಜೀವಿಗಳು ಹಾಗೂ ಇತರೆ ಅಪಾಯಗಳಿಂದ ರಕ್ಷಣೆ ಪಡೆದುಕೊಳ್ಳುವುದು ಮುಖ್ಯವಾಗಿದೆ.

ಇದನ್ನು ಓದಿ : ಅಂಗನವಾಡಿ ಮಕ್ಕಳ, ಬಾಣಂತಿ ಮತ್ತು ಗರ್ಭಿಣಿಯರ ಆಹಾರ ಕಳ್ಳತನ. ಇಬ್ಬರ ಬಂಧನ ಕಾಂಗ್ರೆಸ್ ಮುಖಂಡ ಎಸ್ಕೇಪ್