ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಉತ್ತರಕನ್ನಡ ಜಿಲ್ಲಾ ನ್ಯಾಯಾಲಯ(District Court) ಕೊಲೆ ಪ್ರಕರಣವೊಂದಕ್ಕೆ ಗಂಭೀರ ರೀತಿಯ ಆದೇಶ ನೀಡುವ ಮೂಲಕ ಕೊಲೆಗಡುಕರಿಗೆ ಎಚ್ಚರಿಕೆ ನೀಡಿದೆ.

ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಮರಣ ದಂಡನೆ ನೀಡಿ ಆದೇಶಿಸಿದೆ. ಮತ್ತೋರ್ವ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ(Bhatkal) ಹಲ್ಯಾಣಿ ಗ್ರಾಮದ(Halyani Village) ತಂದೆ ಶ್ರೀಧರ ಭಟ್ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ಮಗ ವಿನಯ ಶ್ರೀಧರ ಭಟ್ ಗೆ ಮರಣ ದಂಡನೆ ನೀಡಿ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಆದೇಶಿಸಿದ್ದಾರೆ.

2023 ರ ಫೆಬ್ರುವರಿಯಲ್ಲಿ ಭಟ್ಕಳ ತಾಲೂಕಿನ ಓಣಿಬಾಗಿಲು ಗ್ರಾಮದ ಕೃಷಿಕ ಶಂಭು ಭಟ್(70), ಅವರ ಪತ್ನಿ ಮಾದೇವಿ (60), ಪುತ್ರ ರಾಜೀವ್(40) ಹಾಗೂ ಸೊಸೆ ಕುಸುಮಾ(35) ಎಂಬುವವರನ್ನು ಕತ್ತಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಮನೆಯೊಳಗೆ ಮಲಗಿದ್ದ ಸಣ್ಣ ಮಗು ಹಾಗೂ ಪಕ್ಕದ ಮನೆಗೆ ಆಡಲು ಹೋಗಿದ್ದ ಇನ್ನೊಬ್ಬ ಮಗ ಮಾತ್ರ ಬಚಾವಾಗಿದ್ದರು. ಆದರೆ, ಹತ್ಯೆಯಿಂದ ಇಬ್ಬರೂ ಮಕ್ಕಳು ಅನಾಥರಾಗಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಭಟ್ಕಳ ಗ್ರಾಮೀಣ ಠಾಣೆ(Bhatkal Rural Station) ಪೊಲೀಸರಿಗೆ ಕೊಲೆಯ ಹಿಂದೆ ಆಸ್ತಿ ಜಗಳ ಇರುವುದು ಪತ್ತೆಯಾಗಿತ್ತು. ಶಂಭು ಭಟ್ಟರ ಮನೆಯ ಹಿರಿಮಗ ಶ್ರೀಧರ ಭಟ್ ಏಳು ತಿಂಗಳ ಹಿಂದೆ ಮೃತಪಟ್ಟಿದ್ದ.
ಆತನ ಪಾಲಿನ ಜಮೀನಿನ ವಿಚಾರವಾಗಿ ಸೊಸೆ ವಿದ್ಯಾ ಹಾಗೂ ಆಕೆಯ ತವರು ಮನೆಯವರ ಜತೆ ಜಗಳ ನಡೆದಿತ್ತು.

ಅದೇ ವಿಚಾರವಾಗಿ ಸೊಸೆ ವಿದ್ಯಾಳ ತಂದೆ ಶ್ರೀಧರ ಭಟ್ ಹಾಗೂ ಸಹೋದರ ವಿನಯ ಭಟ್ ಇಬ್ಬರೂ ಸೇರಿ ಶಂಭು ಭಟ್ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು. ಅಪ್ಪ ಮಗನನ್ನು ಆರೆಸ್ಟ್ ಮಾಡಿದ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಸಾಕಷ್ಟು ಸಾಕ್ಷ್ಯಗಳ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.

ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಮೂರನೇ ಆರೋಪಿ ವಿದ್ಯಾ ಭಟ್ ಈ ಘಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗದ ಇಲ್ಲದ ಕಾರಣ ಅವರನ್ನು ಅಪರಾಧಿ ಎಂದು ಪರಿಗಣಿಸಿಲ್ಲ.


ಪ್ರಕರಣಕ್ಕೆ ಸಂಬಂಧಿಸಿ ಹಲವು ದಾಖಲೆಗಳು, ಸಾಕ್ಷ್ಯಗಳನ್ನ ನ್ಯಾಯಾಲಯಕ್ಕೆ ಒದಗಿಸಲಾಗಿತ್ತು. ಭಟ್ಕಳ ಗ್ರಾಮೀಣ ಠಾಣಾ(Bhatkal Rural Station) ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಇದನ್ನು ಓದಿ :ಸಿಡಿಲು ಬಡಿದು ಮನೆಗೆ ಹಾನಿ. ಸ್ವಲ್ಪದರಲ್ಲಿ ಪಾರಾದ ಮನೆಯವರು.

ಕಾರವಾರದಲ್ಲಿ ವೈಮಾನಿಕ ದಾಳಿ ಎಲ್ಲೆಡೆ ಅಲರ್ಟ್. ಸಾವಿರಾರು ಮಂದಿಯ ರಕ್ಷಣೆ.

ಪಾಕ್ ನಡವಳಿಕೆಯ ಮೇಲೆ ನಮ್ಮ ನಿರ್ಧಾರ. ಅಣ್ವಸ್ತ್ರ ಬೆದರಿಕೆಗೆ ಡೋಂಟ್ ಕೇರ್ : ನರೇಂದ್ರ ಮೋದಿ.