ನವದೆಹಲಿ(NEWDELHI) : ಅವೈಜ್ಞಾನಿಕ ಕಾಮಗಾರಿ ನಡೆಸಿದರಿಂದಲೇ ಉತ್ತರಕನ್ನಡ ಜಿಲ್ಲೆಯ ಅಂಕೋಲಾ(ANKOLA) ತಾಲೂಕಿನ ಶಿರೂರು ಗುಡ್ಡ ಕುಸಿತ (SHIRURU LANDSLIDE) ದುರಂತ ಸಂಭವಿಸಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಪೀಠ (NGT)ಅಭಿಪ್ರಾಯ ವ್ಯಕ್ತಪಡಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಚತುಷ್ಪತ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NATIONAL HIGHWAY AUTHORITY) ಮತ್ತು ಐ.ಆರ್. ಬಿ(IRB) ಕಂಪನಿ ಸೂಕ್ತ ಅಧ್ಯಯನ ನಡೆಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದೆ ಎಂದು ಪೀಠ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಅರಣ್ಯ ಸಚಿವಾಲಯ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದಿಂದ ವಿವರಗಳನ್ನು ಕೇಳಿ ನೋಟಿಸ್ ಜಾರಿ ಮಾಡಿದೆ.
ಜಿಯಾಲಾಜಿಕಲ್ ಸರ್ವೆ ಆಪ್ ಇಂಡಿಯಾ (GIO) ನೀಡಿದ ಪ್ರೈಮರಿ ರಿಪೋರ್ಟ್ ಆಧಾರದಲ್ಲಿ ಪ್ರಕರಣ ದಾಖಲಿಸಿರುವ ಹಸಿರು ಪೀಠ ರಸ್ತೆ ಯೋಜನೆಗಳನ್ನು ಕಾರ್ಯಗತಗೊಳಿಸುವ ಪೂರ್ವದಲ್ಲಿ ಅಲ್ಲಿನ ಭೂ ಪ್ರದೇಶಗಳ ಸಮಗ್ರ ಅಧ್ಯಯನ ನಡೆಸುವುದು ಮತ್ತು ಸಾಧಕ ಬಾಧಕಗಳ ತಿಳಿಯಬೇಕಾಗಿತ್ತು. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಸ್ಪಷ್ಟವಾಗಿ ಪರಿಸರ ಕಾಯ್ದೆಯ ಉಲ್ಲಂಘನೆ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪಶ್ಚಿಮ ಘಟ್ಟಗಳ(WESTERN GHAT) ಸಾಲಿಗೆ ಹೊಂದಿಕೊಂಡಿರುವ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುವುದು ಸಾಮಾನ್ಯ. ಇಲ್ಲಿನ ಧಾರಣಾ ಸಾಮರ್ಥ್ಯದ ಬಗ್ಗೆ ಆಗಾಗ ಭೂವಿಜ್ಞಾನಿಗಳು ಎಚ್ಚರಿಕೆ ನೀಡುತ್ತ ಬಂದಿದ್ದಾರೆ. ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿ ಆಗದಂತೆ ಗುಡ್ಡಗಳನ್ನು ಕತ್ತರಿಸದಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರು.
ಚತುಷ್ಪಥ ಕಾಮಗಾರಿ ಸಂದರ್ಭದಲ್ಲಿ ತಜ್ಞರ ಅಭಿಪ್ರಾಯವನ್ನು ಕಡೆಗಣಿಸಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಲಂಬಾಕೃತಿಯಲ್ಲಿ ಕೊರೆಯಲಾಗಿದ್ದು ಭಾರೀ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಪ್ರಕರಣದ ವಿಚಾರಣೆಯನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಲಾಗಿದೆ.
ಜುಲೈ 16 ರಂದು ಮುಂಜಾನೆ ಬಾರೀ ಮಳೆಗೆ ಶಿರೂರು ಗುಡ್ಡ ಕುಸಿತವಾಗಿ 11 ಜನರು ಸಾವನ್ನಪ್ಪಿದ್ದರು. ಉಳುವರೆ ಗ್ರಾಮದ ಆರು ಮನೆಗಳು ನೆಲಸಮವಾಗಿದ್ದವು. ಜನ ಇನ್ನೂ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇದನ್ನು ಓದಿ : ಕಾರವಾರ ನಗರಸಭೆಗೆ ಆಯ್ಕೆ.