ಹೊನ್ನಾವರ : ತಾಲೂಕಿನ ಕರ್ಕಿ ಕನ್ನಡ ಶಾಲೆಯ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಎಡ ಮತ್ತು ಬಲ ಬದಿಗಳಲ್ಲಿ ಬಸ್ ತಂಗುದಾಣ ನಿರ್ಮಿಸಬೇಕೆಂದು ಬೆಳಕು ಕರ್ಕಿ ಸಾಮಾಜಿಕ ಜಾಲ ತಾಣದ ಸದಸ್ಯರು ಮತ್ತು ನಾಗರಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತ್ ಪಿಡಿಓ ಗೆ ಮನವಿ ನೀಡಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ. ಕನ್ನಡ ಶಾಲೆಯ ಎದುರು ಬಹಳ ಹಿಂದಿನಿಂದಲೂ ಬಸ್ ನಿಲ್ದಾಣದ ಕಟ್ಟಡವಿತ್ತು, ಕೆಲವು ವರ್ಷಗಳ ಹಿಂದೆ ಚತುಷ್ಪಥ ಕಾಮಗಾರಿಗಾಗಿ ಸಂಬಂಧಪಟ್ಟ ಐ.ಆರ್.ಬಿ. ಕಂಪನಿ ಬಸ್ ತಂಗುದಾಣ ಮತ್ತು ರಸ್ತೆಯ ಎರಡೂ ಬದಿಗಳಲ್ಲಿದ್ದ ನೆರಳು ಕೊಡುವ ಮರಗಳನ್ನು ಕಡಿದು ನೆಲಸಮಗೊಳಿಸಿದೆ.
ಅಲ್ಲದೇ ಮೊದಲು ಬಸ್ ಸ್ಟಾಂಡ್ ಇದ್ದ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಖಾಸಗಿ ವಾಣಿಜ್ಯ ಕಟ್ಟಡಗಳು ತಲೆ ಎತ್ತಿ ನಿಂತು ವ್ಯವಹಾರ ನಡೆಸುತ್ತಿರುವುದೂ ಸಹ, ತಮ್ಮ ಆಡಳಿತಕ್ಕೆ ಗೋಚರವಾಗದೇ ಪೊದೆಯ ಮರೆಯಲ್ಲಿ ಹುದುಗಿರುವ ಸಂಗತಿಯೇನು ಅಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಶಾಲಾ ವಿದ್ಯಾರ್ಥಿಗಳು, ಕೂಲಿ-ಕಾರ್ಮಿಕರು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವಂತ ಘೋರ ಪರಿಸ್ಥಿತಿ ಇದ್ದು, ಇನ್ನೊಂದು ಕಡೆ ಮುಂಜಾನೆಯಿಂದ ಸಂಜೆಯವರೆಗೂ ಇಲ್ಲಿಂದ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಹೋಗಿ-ಬರುವ ವಿದ್ಯಾರ್ಥಿಗಳಿಗೆ, ತಮ್ಮ ದಿನನಿತ್ಯದ ದುಡಿಮೆಗೆ ಹೋಗಿ-ಬರುವ ಕೂಲಿ-ಕಾರ್ಮಿಕರಿಗೆ, ಖಾಸಗಿ ಮತ್ತು ಸರಕಾರಿ ನೌಕರರಿಗೆ ಹಾಗೂ ತಮ್ಮ ವೈಯಕ್ತಿಕ ಕೆಲಸ-ಕಾರ್ಯಗಳಿಗೆ ಅಕ್ಕ -ಪಕ್ಕಗಳ ತಾಲೂಕುಗಳಿಗೆ ಹೋಗಿ-ಬರುವ ಜನರಿಗೆ ಇಲ್ಲಿ ಬಸ್ ತಂಗುದಾಣವಿಲ್ಲದೇ, ಬೇಸಿಗೆಯ ಉರಿ ಬಿಸಿಲಿನ ಝಳದಲ್ಲಿ ಬಸವಳಿದು, ಮಳೆಗಾಲದಲ್ಲಿ ಭೋರ್ಗರೆಯುವ ಮಳೆಯಲ್ಲೇ ನೆನೆದು ನಿಲ್ಲಬೇಕಾಗಿದೆ.
ಬಸ್, ಟೆಂಪೋ ಗಳಿಗಾಗಿ ಕಾದು ಕುಳಿತ ಮಹಿಳೆಯರು, ಕಾಲೇಜ್ ವಿದ್ಯಾರ್ಥಿನಿಯರು ಬೇಸಿಗೆಯಲ್ಲಿ ಬಿಸಿಲಿನ ತಾಪ ತಾಳಲಾಗದೇ ತಲೆ ಸುತ್ತು ಬಿದ್ದಂತ ಅನೇಕ ನಿದರ್ಶನಗಳಿವೆ. ತಮ್ಮ ಪಂಚಾಯತ್ ಸೇರಿದಂತೆ ಸಂಬಂಧಪಟ್ಟವರ್ಯಾರು ಈವರೆಗೂ ಮನಸ್ಸು ಮಾಡಿಲ್ಲ ಎಂಬುದೇ ತುಂಬಾ ಬೇಜಾರಿನ ವಿಷಯ ಎಂದಿದ್ದಾರೆ.
ಸಮಸ್ಯೆಗಳಿಗೆ ತಾವುಗಳು ಸ್ಪಂದಿಸದೇ ಇರುವುದರಿಂದ, ಲಿಖಿತವಾಗಿ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದ್ದಾರೆ.
ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿ (ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎದುರಿನ )ಎರಡೂ ಬದಿಗಳಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿಕೊಡಬೇಕೆಂದು ಸಾರ್ವಜನಿಕರ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ರವಿ ಎನ್ ಮುಕ್ರಿ ಕರ್ಕಿ, ವೆಂಕಟೇಶ್ ಮುಕ್ರಿ, ವಿನೋದ್ ಮುಕ್ರಿ ಇದ್ದರು.