ಕಾರವಾರ(KARWAR) : ಮಹಾದಾನಿ, ಕರಾವಳಿಯ ಪ್ರಭಾವಿ ಮೀನುಗಾರರ ಮುಖಂಡ, ಜಿಲ್ಲಾ ಮೀನು ಮಾರಾಟ ಫೇಡರೇಷನ್(DISTRICT FISHERIES SALES ASSOCIATION) ಅಧ್ಯಕ್ಷ ರಾಜು ತಾಂಡೇಲ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 55 ವರ್ಷ ವಯಸ್ಸಾಗಿತ್ತು. ಬಡತನ ಕುಟುಂಬದಲ್ಲಿ ಜನಿಸಿದ ಅವರು ಹೆಚ್ಚಿನ ಶಿಕ್ಷಣ ಪಡೆಯಲಾಗದೆ ಆರಂಭದಲ್ಲಿ ಮೀನುಗಾರಿಕೆ ವೃತ್ತಿಯನ್ನ ಮಾಡಿದವರು. ನಂತರ ಮತ್ಸೋದ್ಯಮಿಯಾಗಿ ಕರಾವಳಿಯಲ್ಲಿ ನೂರಾರು ಕೈಗಳಿಗೆ ಕೆಲಸ ಗುರುತಿಸಿಕೊಂಡಿದ್ದರು. ಉತ್ತರಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾಗಿದ್ದರು.
ಕಾರವಾರ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಅವರು ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವವರಾಗಿದ್ದರು.
ಕರಾವಳಿಯ ಮೀನುಗಾರರ ಧ್ವನಿಯಾಗಿರುವ ರಾಜು ತಾಂಡೇಲ್ ಸದಾ ಸ್ಪಂದಿಸುತ್ತಿದ್ದರು. ಕಾರವಾರದ ಸಾಗರಮಾಲಾ ಯೋಜನೆ, ಹೊನ್ನಾವರದ ಬಂದರು ಯೋಜನೆಗೆ ಮೀನುಗಾರರು ವಿರೋಧಿಸಿದಾಗ ರಾಜು ತಾಂಡೇಲ್ ಅವರ ಬೆನ್ನಿಗೆ ನಿಂತು ಹೋರಾಟ ಮಾಡಿದ್ದರು.
ಕೇವಲ ಮೀನುಗಾರರು ಮಾತ್ರವಲ್ಲದೆ ಎಲ್ಲಾ ಸಮುದಾಯದವರೊಂದಿಗೆ ಅನೋನ್ಯವಾಗಿ ಬೆರೆಯುತ್ತಿದ್ದರು. ಜಿಲ್ಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಾಗಲಿ, ಕ್ರೀಡಾಕೂಟವಾಗಲಿ ಸದಾ ಸಹಾಯ ಮಾಡುತ್ತಿದ್ದರು. ಶಿಕ್ಷಣ ಪಡೆಯುತ್ತಿದ್ದ ಅದೆಷ್ಟೋ ಶಾಲಾ ಕಾಲೇಜುಗಳ ಬಡ ಮಕ್ಕಳಿಗೆ ಶುಲ್ಕ ಪಾವತಿಸಿ ತನ್ನಂತೆ ಅರ್ಧಕ್ಕೆ ಶಿಕ್ಷಣ ನಿಲ್ಲಿಸಬಾರದು ಅಂದುಕೊಂಡಿದ್ದರು.
ಚಿಕ್ಕವರಿಂದ ಹಿಡಿದು ಹಿರಿಯರು ಕೂಡ ರಾಜಣ್ಣ ಅಂತಾನೆ ಕರೆಯುತ್ತಿದ್ದರು. ಸದಾ ಬಡವರ ಕಷ್ಟಕ್ಕೆ ಸದಾ ಕೈ ಜೋಡಿಸುವ ಗುಣ ಹೊಂದಿದ್ದರು. ರಾತ್ರಿ ಒಂದು ಮೂವತ್ತರ ಸುಮಾರಿಗೆ ಹೃದಯಾಘಾತವಾದಾಗ ತಕ್ಷಣ ಆಸ್ಪತ್ರೆಗೆ ಕರೆತರಲಾಯಿತು. ಆದರೂ ಪ್ರಯೋಜನವಾಗಿಲ್ಲ.
ರಾಜು ತಾಂಡೇಲ್ ಚಿತ್ತಾಕುಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅವರ ಅಕಾಲಿಕ ನಿಧನಕ್ಕೆ ಕಾರವಾರದ ಮಹಾ ಜನತೆ ಸಂತಾಪ ಸೂಚಿಸಿದೆ. ಮೃತರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದೆ.
ಇದನ್ನು ಓದಿ : ಶಿಕ್ಷಕಿಯರು ರಾಷ್ಟ್ರ ಮಟ್ಟಕ್ಕೆ