ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) : ಭಾರತೀಯ ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಲಿರುವ ನೂತನ ಯುದ್ಧನೌಕೆ ‘ಸಮರ್ಥಕ್'(Samarthak) ನಾಳೆ ಕಾರವಾರದ ಐಎನ್ಎಸ್ ಕದಂಬ (INS Kadamba) ನೌಕಾನೆಲೆಯಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸಮರ್ಪಣೆಗೊಳ್ಳಲಿದೆ.

ಈ ಮಹತ್ವದ ಕಾರ್ಯಕ್ರಮದಲ್ಲಿ ದೇಶದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್(C P Radhakrishan) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

​ಬೆಳಿಗ್ಗೆ 9-20ಕ್ಕೆ ಗೋವಾದ ದಾಂಬೋಲಿಂ ವಿಮಾನ ನಿಲ್ದಾಣಕ್ಕೆ(Goa Dabolium Airport) ಉಪರಾಷ್ಟ್ರಪತಿಗಳ ಆಗಮನವಾಗಲಿದ್ದು, ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಕಾರವಾರಕ್ಕೆ(Karwar) ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.​ಬೆಳಗ್ಗೆ 11.30ಕ್ಕೆ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ನಡೆಯಲಿರುವ ‘ಸಮರ್ಥಕ್’ ಯುದ್ಧನೌಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2.10ಕ್ಕೆ ಕಾರವಾರದಿಂದ ನಿರ್ಗಮಿಸುವ ಅವರು ವಾಪಸ್ ದಾಂಬೋಲಿಂ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

​ಮೀನುಗಾರಿಕೆಗೆ ನಿರ್ಬಂಧ ಹಾಗೂ ಬಿಗಿ ಭದ್ರತೆ: ಉಪರಾಷ್ಟ್ರಪತಿಗಳ ಭೇಟಿ ಮತ್ತು ನೌಕೆ ಲೋಕಾರ್ಪಣೆ ಸಮಾರಂಭದ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಅತಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪೊಲೀಸ್ ಇಲಾಖೆ(Police Department) ಹಾಗೂ ನೌಕಾಪಡೆಯು ವಿಶೇಷ ನಿಗಾ ವಹಿಸಿದೆ.

​ಜೊತೆಗೆ, ಸುರಕ್ಷತೆಯ ದೃಷ್ಟಿಯಿಂದ ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೌಕಾನೆಲೆ ಸುತ್ತಲಿನ ಕಡಲ ಭಾಗದಲ್ಲಿ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾರವಾಡದಿಂದ ಮಾಜಾಳಿಯವರೆಗಿನ(Harwad To Majali) ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದ್ದು, ಮೀನುಗಾರರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.