ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು (Mangaluru) : ರಾಜ್ಯದ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರು ಕೋಟೆಕಾರು ಬ್ಯಾಂಕ್ ದರೋಡೆಯಲ್ಲಿ  18.300 ಕೆಜಿ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ನಾಲೈದು ಠಾಣೆಗಳ ಅಪರಾಧ ಪತ್ತೆಯಲ್ಲಿ ಪಳಗಿದ ಪೊಲೀಸರು ಭಾಗವಹಿಸಿದ್ದರು. ಐವರು ಇನ್ಸ್ ಪೆಕ್ಟರ್, ಐವರು ಸಬ್ ಇನ್ಸ್ ಪೆಕ್ಟರ್, ಇಬ್ಬರು ಎಸಿಪಿಗಳು ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಿದ್ದಾರೆ. ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಎಂಟು ಪೊಲೀಸ್ ತಂಡಗಳು ಕೆಲಸ ಮಾಡಿದ್ದವು.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಕಮಿಷನ‌ರ್ ಅನುಪಮ್ ಅಗರ್ವಾಲ್, ದೊಡ್ಡ ಸವಾಲನ್ನು ನಮ್ಮ ಪೊಲೀಸರು ಭೇದಿಸಿದ್ದಾರೆ. ಇದರ ಶ್ರೇಯ ಎಲ್ಲ ಪೊಲೀಸ್ ತಂಡಕ್ಕೂ ಹೋಗುತ್ತದೆ. ಹೆಚ್ಚಿನ ಬ್ಯಾಂಕ್ ಡಕಾಯಿತಿ ಪ್ರಕರಣಗಳಲ್ಲಿ ಇಷ್ಟು ಬೇಗ ಎಲ್ಲ ಚಿನ್ನಾಭರಣ ರಿಕವರಿ ಆಗುವುದಿಲ್ಲ. ಕರ್ನಾಟಕದ ಎರಡನೇ ಅತಿದೊಡ್ಡದು ಎನ್ನಲಾದ ಈ ಪ್ರಕರಣದಲ್ಲಿ ನಮ್ಮ ಪೊಲೀಸರು ಕಳವಾದ ಚಿನ್ನವನ್ನು ಪೂರ್ತಿಯಾಗಿ ವಶಕ್ಕೆ ಪಡೆದಿದ್ದಾರೆ ಎಂದರು.

ದರೋಡೆಕೋರರು ಕೋಟೆಕಾರು ಬ್ಯಾಂಕ್ ದರೋಡೆಗೆ ಆರು ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದರು. ಶಶಿ ದೇವರ್ ಎನ್ನುವಾತ ಮುರುಗಂಡಿಗೆ ಬ್ಯಾಂಕ್ ಬಗ್ಗೆ ಮಾಹಿತಿ ಕೊಟ್ಟು ದರೋಡೆಗೆ ಸಂಚು ರೂಪಿಸಿದ್ದ. ಅದರಂತೆ, ಮುರುಗಂಡಿ ಮತ್ತು ಯೋಶುವಾ ರಾಜೇಂದ್ರನ್ ಕಳೆದ ಆಗಸ್ಟ್, ನವೆಂಬ‌ರ್ ತಿಂಗಳಲ್ಲಿ ಮಂಗಳೂರಿಗೆ ರೈಲಿನಲ್ಲಿ ಬಂದು ಕೆಸಿ ರೋಡ್ ನಲ್ಲಿ ಪರಿಶೀಲನೆ ನಡೆಸಿದ್ದರು. ಶುಕ್ರವಾರ ಮಧ್ಯಾಹ್ನ ಮುಸ್ಲಿಮರು ಪ್ರಾರ್ಥನೆಗೆ ಹೋಗುವ ಸಂದರ್ಭದಲ್ಲಿ ಯಾರೂ ಇಲ್ಲವೆಂದೇ ಅದೇ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದರು. ಕೃತ್ಯದ ಬಳಿಕ ಮುರುಗಂಡಿ ಮತ್ತು ಯೋಶುವಾ ಕಾರಿನಲ್ಲಿ ತಲಪಾಡಿ ಗೇಟ್ ಮೂಲಕ ಕೇರಳಕ್ಕೆ ತೆರಳಿದ್ದರೆ, ಇತರ ಮೂವರು ಬಸ್ ಮತ್ತು ಆಟೋದಲ್ಲಿ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದು ಎಸ್ಕೆಪ್ ಆಗಿದ್ದರು.

ಜ.17ರಂದು ದರೋಡೆ ನಡೆದಿದ್ದರೆ, ಮುರುಗಂಡಿ, ಯೋಶುವಾ ನೇತೃತ್ವದ ತಂಡವು ಜ.16ರಂದೇ ಮುಂಬೈನಿಂದ ಫಿಯೇಟ್ ಕಾರಿನಲ್ಲಿ ಹೊರಟಿತ್ತು. ಇವರು ಹೆದ್ದಾರಿಯಲ್ಲಿ ಬರುತ್ತಿದ್ದಾಗ ಕರ್ನಾಟಕದ ಶಿರೂರು ಟೋಲ್ ಗೇಟ್ ನಲ್ಲಿ ಮಹಾರಾಷ್ಟ್ರ ನೋಂದಣಿಯ ನಂಬರ್ ಪ್ಲೇಟ್ ಇತ್ತು. ಹೆಜಮಾಡಿಯಲ್ಲಿ ಬೆಂಗಳೂರು ನೋಂದಣಿಯ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡಿದ್ದರು. ಇವೆರಡೂ ನಕಲಿ ನಂಬ‌ರ್ ಪ್ಲೇಟ್ ಆಗಿತ್ತು. ಇದರಿಂದ ಮುಂಬೈ ತಂಡದ ಶಾಮೀಲಾತಿ ಬಗ್ಗೆ ನಮಗೆ ಮೊದಲಿಗೆ ಸಂಶಯ ಬಂದಿತ್ತು. ಅಲ್ಲದೆ, ಕೆಲವು ಆರೋಪಿಗಳು ಮುಂಬೈಗೆ ರೈಲಿನಲ್ಲಿ ತೆರಳಿದ್ದು ತಿಳಿಯುತ್ತಲೇ ನಮ್ಮ ಪೊಲೀಸ್‌ ತಂಡ ಮುಂಬೈಗೆ ತೆರಳಿತ್ತು ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ದರೋಡೆ ಕೃತ್ಯದ ಬಳಿಕ ಮಂಗಳೂರಿನಿಂದ ಮುಂಬೈಗೆ ತೆರಳಿದ್ದ ಕಣ್ಣನ್ ಮಣಿ ಅಲ್ಲಿಂದ ಮತ್ತೆ ತಮಿಳುನಾಡಿಗೆ ಬರುತ್ತಿದ್ದ ರೈಲು ಹತ್ತಿದ್ದ. ಅಷ್ಟರಲ್ಲಿ ಕೇರಳದಲ್ಲಿ ಅದಾಗಲೇ ಬೀಡು ಬಿಟ್ಟಿದ್ದ ಮಂಗಳೂರಿನ ಸಿಸಿಬಿ ಪೊಲೀಸರ ತಂಡವು ತಿರುವಣ್ಣಾಮಲೈ ರೈಲು ನಿಲ್ದಾಣಕ್ಕೆ ಧಾವಿಸಿತ್ತು. ಅಲ್ಲಿನ ರೈಲಿನಿಂದ ಇಳಿಯುತ್ತಲೇ ಕಣ್ಣನ್ ಮಣಿಯನ್ನು ಮಂಗಳೂರು ಪೊಲೀಸರು ಆರೆಸ್ಟ್ ಮಾಡಿದ್ದರು. ಅಲ್ಲದೆ, ಆತನನ್ನು ವಶಕ್ಕೆ ಪಡೆದು ಡ್ರಿಲ್ ಮಾಡಿದಾಗ ದರೋಡೆ ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಬಾಯಿಬಿಟ್ಟಿದ್ದ. ಆ ಮೂಲಕ ಎರಡೇ ದಿನದಲ್ಲಿ ಪೊಲೀಸರಿಗೆ ದರೋಡೆ ತಂಡದ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿತು.

ತಮಿಳುನಾಡಿನಲ್ಲೇ ಪೊಲೀಸ್ ಕಾರ್ಯಾಚರಣೆ ಮರುದಿನವೇ ಪ್ರಮುಖ ಆರೋಪಿಗಳಾದ ಮುರುಗಂಡಿ ದೇವರ್ ಮತ್ತು ಯೋಶುವಾ ರಾಜೇಂದ್ರನ್ ಅವರನ್ನು ತಿರುನಲ್ವೇಲಿಯ ಸ್ಥಳೀಯ ಪೊಲೀಸರ ಸಹಾಯದಿಂದ ಮಹೇಶ್‌ ಪ್ರಸಾದ್‌ ಅವರಿದ್ದ ತಂಡವು ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಎಂಬಲ್ಲಿಂದ ವಶಕ್ಕೆ ಪಡೆದಿತ್ತು. ಆ ಸಂದರ್ಭದಲ್ಲಿ ಸಣ್ಣ ಚೀಲದಲ್ಲಿದ್ದ ಎರಡು ಕೆಜಿಯಷ್ಟೇ ಚಿನ್ನಾಭರಣ ಪತ್ತೆಯಾಗಿತ್ತು. ಆನಂತರ, ಮುರುಗಂಡಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ತನ್ನ ಮನೆಯಲ್ಲೇ ಚಿನ್ನಾಭರಣದ ಮೂಟೆಯನ್ನು ಅವಿತಿಟ್ಟಿದ್ದ ಬಗ್ಗೆ ಮಾಹಿತಿ ನೀಡಿದ್ದ. ಸಿಸಿಬಿ ಸೇರಿದಂತೆ ಮಂಗಳೂರು ಪೊಲೀಸರು ಕೇವಲ ಐದು ದಿನಗಳಲ್ಲಿ ತಮಿಳುನಾಡು, ಕೇರಳದಲ್ಲಿ 2800 ಕಿಮೀ ಉದ್ದಕ್ಕೆ ನಿದ್ದೆಯಿಲ್ಲದೆ ಕಾರಿನಲ್ಲೇ ಪ್ರಯಾಣಿಸಿದ್ದರು. ಇದೇ ವೇಳೆ, ಮಂಗಳೂರಿನಲ್ಲಿ ಹಲವಾರು ಅಧಿಕಾರಿಗಳು, ನುರಿತ ತಂತ್ರಜ್ಞರು ಆರೋಪಿಗಳ ಚಲನವಲನ ಬಗ್ಗೆ ತಿಳಿಯಲು ಟೆಕ್ನಿಕಲ್‌ ಸಾಕ್ಷ್ಯದ ಕಲೆಹಾಕಿದ್ದಾರೆ.

ಯಾರೀತಸೂತ್ರಧಾರಶಶಿದೇವ‌ರ್? :
ಅಂದಹಾಗೆ, ಸ್ಥಳೀಯರ ಕೈವಾಡದ ಬಗ್ಗೆ ಕೇಳಿದ ಪ್ರಶ್ನೆಗೆ, ಶಶಿ ದೇವರ್ ಎನ್ನುವಾತ ಎಲ್ಲಿಯ ವ್ಯಕ್ತಿಯೆಂದು ಇನ್ನೂ ತಿಳಿದಿಲ್ಲ. ಆತನ ಬಂಧನ ಬಳಿಕವೇ ಕೋಟೆಕಾರು ಬ್ಯಾಂಕನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದರು, ಇದರ ಬಗ್ಗೆ ಸುಳಿವು ಕೊಟ್ಟ ಸ್ಥಳೀಯರು ಯಾರು ಎನ್ನುವ ಮಾಹಿತಿ ಸಿಗಬೇಕಷ್ಟೇ ಎಂದು ಕಮಿಷನ‌ರ್ ತಿಳಿಸಿದ್ದಾರೆ. ಧಾರಾವಿ ಗ್ಯಾಂಗ್ ಸದಸ್ಯರೇ ಮಾಹಿತಿ ಕೊಟ್ಟಿದ್ದರೇ ಎನ್ನುವ ಪ್ರಶ್ನೆಗೆ, ಕಮಿಷನ‌ರ್ ಸ್ಪಷ್ಟ ಮಾಹಿತಿ ನೀಡಿಲ್ಲ. ನಮ್ಮ ಪೊಲೀಸರು ಸಿಸಿಟಿವಿ ಇನ್ನಿತರ ಸಾಕ್ಷ್ಯಗಳನ್ನು ಆಧರಿಸಿ ಪ್ರಕರಣ ಭೇದಿಸಿದ್ದಾರೆ ಎಂದರು.
ಸದ್ಯದ ಮಾಹಿತಿ ಪ್ರಕಾರ, ಶಶಿ ದೇವರ್ ಮಂಗಳೂರು ಮೂಲದವನು ಎನ್ನಲಾಗುತ್ತಿದ್ದು, ಆತ ಮುಂಬೈ ಜೈಲಿನಲ್ಲಿದ್ದಾಗ ಮುರುಗಂಡಿ ಪರಿಚಯವಾಗಿತ್ತು. ಇಬ್ಬರೂ ಜೊತೆಗೂಡಿ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿದ್ದರು.

ಪೊಲೀಸ್ ತಂಡದಲ್ಲಿ ಎಸಿಪಿಗಳಾದ ಧನ್ಯಾ ನಾಯಕ್, ಮನೋಜ್ ನಾಯ್ಕ, ಸುರತ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್‌, ಕೋಣಾಜೆ ಇನ್ಸ್ ಪೆಕ್ಟರ್ ರಾಜೇಂದ್ರನ್, ಕಂಕನಾಡಿ ನಗರ ಠಾಣೆಯ ಟಿ ಡಿ ನಾಗರಾಜ್, ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಗೌಡ, ಸಿಸಿಬಿಯ ಮಹಮ್ಮದ್ ರಫೀಕ್, ಪಿಎಸ್‌ಐಗಳಾದ ಕಾವೂರು ಠಾಣೆಯ ಮಲ್ಲಿಕಾರ್ಜುನ, ಸಿಸಿಬಿಯ ಸುದೀಪ್, ಶರಣಪ್ಪ, ಸುರತ್ಕಲ್ ಠಾಣೆಯ ರಾಘವೇಂದ್ರ, ಉಳ್ಳಾಲದ ಸಂತೋಷ್ ಸೇರಿ ಮಂಗಳೂರು ನಗರ ವ್ಯಾಪ್ತಿಯ ಠಾಣೆಗಳಲ್ಲಿರುವ ಕ್ರೈಮ್ ಪೊಲೀಸ್ ತಂಡವನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಪ್ರತ್ಯೇಕ ಸ್ಕಾಡ್ ತಂಡವೊಂದು ತಮಿಳುನಾಡಿಗೆ ತೆರಳಿ ಕಾರ್ಯಾಚರಣೆ ನಡೆಸಿತ್ತು.

ಒಟ್ಟಾರೆಯಾಗಿ ಪೊಲೀಸರು ಒಗ್ಗೂಡಿ ಕೆಲಸ ಮಾಡಿದರೆ ಯಾವುದನ್ನೂ ಭೇದಿಸಬಹುದು ಎನ್ನುವುದಕ್ಕೆ ಮಂಗಳೂರಿನ ಕೋಟೆಕಾರ್ ಬ್ಯಾಂಕ್ ಪ್ರಕರಣವೇ ಸಾಕ್ಷಿಯಾಗಿದೆ.

ಇದನ್ನು ಓದಿ : ಯುವಕನ ಮುಗಿಸಿದ ಮೂವರಿಗೆ ಗುಂಡಿನ ಎಚ್ಚರ ನೀಡಿದ ಪೊಲೀಸರು.

ಫೆಬ್ರುವರಿ ಎರಡರಿಂದ ಐದರವರೆಗೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ ಪುನರ್ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ

ಬಿಗ್ ಬಾಸ್ ಗೆದ್ದ ಹನುಮಂತ ಹಣ ಏನು ಮಾಡ್ತಾರೆ ಗೊತ್ತಾ.

ಪ್ರಮುಖ ಆರೋಪಿ ವಾಸಿಮ್ ವಲ್ಕಿಯವನಲ್ಲ. ಆತನನ್ನ ಹಿಡಿದುಕೊಟ್ಟವರಿಗೆ ಲಕ್ಷ ರೂ ಇನಾಮು.