ಕಾರವಾರ : ಕಾರವಾರ ತಾಲೂಕಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕವಿಯಿತ್ರಿ, ಕತೆಗಾರ್ತಿ, ಲೇಖಕಿ, ಅಂಕಣಗಾರ್ತಿ ಶ್ರೀಮತಿ ಪ್ರೇಮಾ ಟಿ. ಎಮ್. ಆರ್. ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸಮ್ಮೇಳನವು ನವೆಂಬರ 15 ರಂದು ನಡೆಯಲಿದೆ. ಕುಮಟಾ ತಾಲೂಕಿನ ಕೂಜಳ್ಳಿಯ “ಬೆಂಕಿಮನೆ” ಎಂಬ ಕಲಾವಿದರ ಮನೆತನದಲ್ಲಿ ಹುಟ್ಟಿದ ಪ್ರೇಮಾ ಕವಿಯತ್ರಿ, ಕಥೆಗಾರ್ತಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರು ಮಾಡಿದ್ದಾರೆ. ಶ್ರೀಮತಿ ಮಾದೇವಿ ಮತ್ತು ಶ್ರೀ ದೇವಪ್ಪ ನಾಯ್ಕರ ಸುಪುತ್ರಿ. ತಂದೆ ದೇವಪ್ಪ ಯಕ್ಷಗಾನ ಕಲಾವಿದರಾದರೆ, ದೊಡ್ಡಪ್ಪ ನಾರಾಯಣ ನಾಯ್ಕ ಯಕ್ಷಗಾನ ಭಾಗವತರು. ಅಣ್ಣ ಮೋಹನ ನಾಯ್ಕ ಕೂಜಳ್ಳಿ ನಾಡಿನ ಹೆಸರಾಂತ ಯಕ್ಷಗಾನ ಕಲಾವಿದ ಮತ್ತು ಲೇಖಕರಾಗಿರುವುದು ವಿಶೇಷ.
ಭಟ್ಕಳ ತಾಲೂಕಿನ ಬಂದರ್ ಕಡಲ ಕಿನಾರೆಯ ತಲಗೋಡ ಗ್ರಾಮದ ರೋಡ್ಡಾಸ್ರಮನೆಯ ಸೊಸೆಯಾಗಿರುವ ಇವರ ಪತಿ ಟಿ. ಎಂ. ಆರ್. ನಾಯ್ಕ. ನಾಯ್ಕ ಅವರು ಎಲ್ ಐ ಸಿ ಅಭಿವೃದ್ಧಿ ಅಧಿಕಾರಿಯಾಗಿ ಈಗ ನಿವೃತ್ತರಾಗಿದ್ದಾರೆ. ಇವರ ಪುತ್ರ ಅಭಿಷೇಕ್ ಬಿ.ಇ., ಎಂ ಬಿ ಎ. ಪದವೀಧರರಾಗಿದ್ದಾರೆ.
ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ ಪ್ರೇಮಾ ಈಗ ಪತಿಯೊಂದಿಗೆ ಕಾರವಾರ ಕಾಲರುದ್ರೇಶ್ವರ ದೇವಸ್ಥಾನ ಹತ್ತಿರದ “ಚಿಂತನಗಂಗಾ” ದಲ್ಲಿ ವಾಸವಾಗಿದ್ದಾರೆ. “ನನ್ನೊಳಗಿನ ಬರಹಗಾರ್ತಿ ಮುಂಜಾವಿನ ಅಂಗಳದಲ್ಲಿಯೇ ಹುಟ್ಟಿ ಬೆಳೆದದ್ದು” ಎಂದು ವಿನಯದಿಂದ ನೆನೆಸಿಕೊಳ್ಳುವ ಪ್ರೇಮಾ, ಅವರ “ವಿಲ್ಲು ಬರೆಯುತ್ತೇನೆ” ಎಂಬ ಕವನ ಸಂಕಲನ ಪ್ರಕಟಗೊಂಡಿದೆ. ನಾಲ್ಕು ಲೇಖನಗಳ ಪುಸ್ತಕ, ಒಂದು ಕಥಾ ಸಂಕಲನ, ಎರಡು ಕವನ ಸಂಕಲನ, ಒಂದು ವಿಮರ್ಶಾ ಸಂಕಲನ ಪ್ರಕಟಣೆಗೆ ಸಿದ್ಧವಾಗಿದೆ. ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ ಇವರು ಕಾರ್ಯಕ್ರಮ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಕ.ಸಾ.ಪ. ಕಾರ್ಯಕಾರಿ ಮಂಡಳಿ ಹಾಗೂ ಆಜೀವ ಸದಸ್ಯರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಬಾವಿ ಸಭೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆಗಾಗಿ ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಅಧ್ಯಕ್ಷತೆಯಲ್ಲಿ ಆರು ಜನ ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯೊಂದನ್ನು ರಚಿಸಲಾಗಿತ್ತು. ಆಯ್ಕೆ ಸಮಿತಿಯು ಸಭೆ ಸೇರಿ ಬೇರೆ ಬೇರೆ ಕಸಾಪ ಸದಸ್ಯರಿಂದ ಸೂಚಿಸಲ್ಪಟ್ಟ ಪ್ರಮುಖರಾದ ಜಿ. ಡಿ. ಗೋವಿಂದಕುಮಾರ, ಜಿ. ಡಿ. ಪಾಲೇಕರ, ರಮೇಶ ಗುನಗಿ, ವಿದ್ಯಾ ನಾಯ್ಕ, ಡಾ. ಶಿವಾನಂದ ನಾಯಕ, ಪ್ರೇಮಾ ಟಿ. ಎಂ. ಆರ್. , ವಿ. ಪಿ. ನಾಯ್ಕ, ಯಮುನಾ ಗಾಂವಕರ ಈ ಎಂಟು ಹೆಸರುಗಳನ್ನು ಇಟ್ಟುಕೊಂಡು ಕೂಲಂಕುಶವಾಗಿ ಚರ್ಚಿಸಿ ಅಂತಿವಾಗಿ ಮಹಿಳಾ ಸಾಹಿತಿ ಪ್ರೇಮ ಟಿ. ಎಂ. ಅರ್. ಅವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ನಡೆದ ಕಸಾಪ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಸಮಿತಿಯು ಸರ್ವಾಧ್ಯಕ್ಷರಾಗಿ ಪ್ರೇಮಾ ಟಿ. ಎಂ. ಆರ್. ರನ್ನು ಆಯ್ಕೆ ಮಾಡಿದ ವರದಿಯನ್ನು ಮಂಡಿಸಿ, ಆಯ್ಕೆಗೆ ಪೂರಕವಾದ ಅಂಶಗಳನ್ನು ಸಭೆಗೆ ವಿವರಿಸಿತು. ಅಧ್ಯಕ್ಷ ರಾಮಾ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯು ಆಯ್ಕೆ ಸಮಿತಿ ಸಲ್ಲಿಸಿದ ವರದಿಯ ಬಗ್ಗೆ ಕೂಲಂಕುಶವಾಗಿ ಚರ್ಚಿಸಿತು. ಅಂತಿಮವಾಗಿ ಪ್ರೇಮಾ ಟಿ. ಎಂ. ಆರ್. ರವರ ಆಯ್ಕೆಯನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ.
ನವೆಂಬರ 15 ರಂದು ಬೆಳಿಗ್ಗೆ ಕನ್ನಡಾಂಬೆಯ ಭವ್ಯ ಮೆರವಣಿಗೆ, ಉದ್ಘಾಟನಾ ಸಮಾರಂಭ, ಬಹುಭಾಷಾ ಕವಿಗೋಷ್ಠಿ, ವಿಚಾರ ಗೋಷ್ಠಿ, ಸಾಧಕರಿಗೆ ಸನ್ಮಾನ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಕುಮಟಾದಲ್ಲಿ ಕಾರ್ಮಿಕರ ನಡುವೆ ಜಗಳ. ಕೊಲೆ