ಕಾರವಾರ(KARWAR) : ಮಹಿಳೆಯೋರ್ವಳ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಶಿರವಾಡ(SHIRWAD) ಬಳಿ ನಡೆದಿದೆ.
ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದ(RAILWAY STATION) ಹಿಂಬದಿಯಲ್ಲಿ ಘಟನೆ ನಡೆದಿದೆ. ಕಿನ್ನರ ಮೂಲದ ಸಂಜನಾ ಗಜಾನನ ತಳೆಕರ(35) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮೃತದೇಹದ ತಲೆ ಹಾಗೂ ಬೆನ್ನಿನ ಭಾಗ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ನಡೆದ ಕೆಲ ಹೊತ್ತಿನಲ್ಲಿ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಮತ್ತು ಶ್ವಾನ ದಳ(DOG SQUAD) ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಸೀಮೆಎಣ್ಣೆಯ ಕ್ಯಾನ್ ಪೊಲೀಸರಿಗೆ ದೊರೆತಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪತಿ ಗಜಾನನ ಅವರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
ಸಂಜನಾ ಬೆಳಿಗ್ಗೆ ತನ್ನ ಮಗಳನ್ನ ಶಾಲೆಗೆ ಬಿಟ್ಟು ಬಂದಿದ್ದಾಳೆ. ಮನೆಯಿಂದ ಹೋಗುವಾಗಲೇ ಸೀಮೆಎಣ್ಣೆ ಕ್ಯಾನ್ ತೆಗೆದುಕೊಂಡು ಹೋಗಿರೋದನ್ನ ಸ್ಥಳೀಯರು ನೋಡಿದ್ದಾರೆ. ಈ ಬಗ್ಗೆ ಸ್ಥಳೀಯರು ವಿಚಾರಿಸಿದಾಗ ಒಬ್ಬರಿಗೆ ಕೊಡಲು ಒಯುತ್ತಿದ್ದೇನೆಂದು ಹೇಳಿದ್ದಾಳಂತೆ. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಮೃತ ಸಂಜನಾ ಕಳೆದೊಂದು ವಾರದಿಂದ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು. ಮನೆಯಿಂದ ಒಂದೆರಡು ಬಾರೀ ರಾತ್ರಿ ಓಡಿ ಹೋಗಿದ್ದಳು. ತಾನು ಸಾಯುತ್ತೇನೆಂದು ಹೇಳುತ್ತಿದ್ದಳಂತೆ. ಆಗ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಸರಿಯಾಗಿದ್ದಳು. ಊರು ಕಿನ್ನರದಲ್ಲಿ ಮನೆ ನಿರ್ಮಿಸುತ್ತಿದ್ದಾಗ ಗಂಡ ಹೆಂಡತಿ ಇಬ್ಬರು ಮನೆಗೆ ಹೋಗಿ ಬರುತ್ತಿದ್ದರು. ಆದರೆ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆ. ಈಕೆಗೆ 11 ವರ್ಷದ ಹೆಣ್ಣು ಮಗುವೊಂದಿದೆ.
ಕಾರವಾರ ಗ್ರಾಮೀಣ ಠಾಣೆ (KARWAR RURAL STATION) ಪೊಲೀಸರು ಸ್ಥಳೀಯರು ಮತ್ತು ಪತಿ ಗಜಾನನ ತಳೆಕರ ಅವರನ್ನ ವಿಚಾರಿಸಿದ್ದು ತನಿಖೆ ಮುಂದುವರಿದಿದೆ .
ಇದನ್ನು ಓದಿ : ನವಜಾತ ಶಿಶು ಬಿಟ್ಟು ಹೋದ ಪಾಪಿಗಳು