ಅಂಕೋಲಾ : ಶಿರೂರು ಭೂಕುಸಿತ ಘಟನೆಯಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಅವರ ಮಕ್ಕಳು ಭಾನುವಾರ ಈಶ್ವರ್ ಮಲ್ಪೆ ಅವರಲ್ಲಿ ಪರಿಪರಿಯಾಗಿ ಬೇಡಿಕೊಂಡ ಘಟನೆ ನಡೆದಿದೆ.

ದಯವಿಟ್ಟು ನಮ್ಮ ತಂದೆಯ ಒಂದು ಅಸ್ಥಿಯನ್ನಾದರೂ ಹುಡುಕಿಕೊಡಿ ಎಂದು ಅಂಗಲಾಚಿದರು. ಹೆಣ್ಣುಮಕ್ಕಳ ಅಳಲು ನೋಡಲಾಗದೆ ಈಶ್ವರ್ ಮಲ್ಪೆ ಬೆಳಿಗ್ಗೆ ತಿಂಡಿ ಸಹ ತಿನ್ನದೇ ಸ್ಕ್ಯೂಬಾ ಹಾಕಿ ಸ್ಥಳದಲ್ಲಿ ಹುಡುಕಾಟ ನಡೆಸಿದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಈಶ್ವರ್ ಅವರಿಗೆ ಮೇಲಕ್ಕೆ ಬರುವಂತೆ ಒತ್ತಾಯಿಸಿದರು. ಇದರಿಂದ ಅವರು ಬೇಸರ ವ್ಯಕ್ತಪಡಿಸಿದರು.

ಇಂದು ನೀರು ಸಹಜವಾಗಿದೆ. ಮಳೆ ಬಂದಲ್ಲಿ ಕಾರ್ಯಾಚರಣೆ ಮಾಡೋಕೆ ಆಗೋದಿಲ್ಲ. ಆದರೆ ಇಂದು ಮಳೆಯಿಲ್ಲ. ಆದರೂ ಸಂಬಂಧಪಟ್ಟವರು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

ಹಿಂದು ಸಂಪ್ರದಾಯದಂತೆ ಮುಕ್ತಿ ನೀಡಬೇಕಾದರೆ ಒಂದು ಮೂಳೆಯಾದರೂ ಸಿಗಬೇಕು. ತಂದೆಯವರ ಒಂದು ಮೂಳೆಯಾದರೂ ಸಿಗಲಿ. ಹೀಗಾಗಿ ಈಶ್ವರ್ ಮಲ್ಪೆ ಅವರ ಬಳಿ ಹೇಳಿದ್ದೇವು. ಇಂದು ಅವರು ಹುಡುಕುವಾಗ ಅವರಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಮಕ್ಕಳಾದ ಪಲ್ಲವಿ  ಮತ್ತು ಕೃತಿಕಾ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಅಧಿಕಾರಿಗಳಿಂದ ನಮಗೆ ಸಹಕಾರ ಸಿಕ್ಕಲ್ಲಿ ಶೋಧ ನಡೆಸಲಾಗುತ್ತದೆ. ಇಲ್ಲದಿದ್ದಲ್ಲಿ ಕಾರ್ಯಾಚರಣೆ ಮಾಡೋಕೆ ಆಗೋದಿಲ್ಲ ಎಂದು ಈಶ್ವರ್ ಮಲ್ಪೆ ಹೇಳಿದ್ದಾರೆ.

ಈಶ್ವರ್ ಮಲ್ಪೆ ಅವರು ಕಳೆದ ಕೆಲ ದಿನಗಳಿಂದ ಗಂಗಾವಳಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಜಗನ್ನಾಥ್ ನಾಯ್ಕ, ಲೋಕೇಶ್ ನಾಯ್ಕ ಮತ್ತು ಅರ್ಜುನ್ ಮೃತದೇಹ ಸಿಕ್ಕಿಲ್ಲ. ಇದೀಗ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.