ಹೊನ್ನಾವರ(HONNAVAR): ಗಣೇಶ ಚತುರ್ಥಿ(GANESH CHATURTHI)ಯ ವಿಶೇಷ ದಿನದಂದು ಉತ್ತರಕನ್ನಡ(UTTARKANNADA) ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಅದ್ದೂರಿಯಿಂದ ಗಣೇಶ ಹಬ್ಬವನ್ನ ಆಚರಿಸಲಾಯಿತು.

ಪೌರಾಣಿಕ ಕ್ಷೇತ್ರ ಇಡಗುಂಜಿ ಶ್ರೀ ಬಾಲವಿನಾಯಕ(IDAGUNJI BALAVINAYAK) ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆಯೇ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರಿಗೆ ಸೇವೆ ಸಲ್ಲಿಸಿದರು. ಹೊನ್ನಾವರ ಸುತ್ತಮುತ್ತಲಿನ ನಾಗರಿಕರು ವಿಘ್ನ ನಿವಾರಕನಿಗೆ ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಮೊದಲ ಫಲಗಳನ್ನ ನೀಡಿ ಕೃತಾರ್ಥರಾದರು. ತೆಂಗು, ಬಾಳೆ, ಅಡಿಕೆ, ಸೇರಿ ಇತರೆ ವಸ್ತುಗಳನ್ನು ತಂದು ಬೆಳಗಿನ ಜಾವ ಗಣಪನ ಮುಂದಿರುವ ಮಂಟಪದಲ್ಲಿ ಕಟ್ಟಿ, ವರ್ಷಪೂರ್ತಿ ನಮ್ಮ ಬೆಳೆ ರಕ್ಷಿಸುವಂತೆ ರೈತರು ಪ್ರಾರ್ಥಿಸಿದರು.

ಚತುರ್ಥಿಯ ಹಿನ್ನಲೆಯಲ್ಲಿ ರಾಜ್ಯ, ಪರ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಹಬ್ಬದ ಹಿನ್ನಲೆಯಲ್ಲಿ ಸುಮಾರು 50 ಕ್ವಿಮಟಲ್ ಪಂಚಕಜ್ಜಾಯ ಮಾಡಲಾಗಿತ್ತು.

ದೇವಾಲಯದ ಪ್ರವೇಶ ದ್ವಾರದಿಂದ ಮೂರು ಕಿಲೋಮೀಟರ್ ಉದ್ದದ ಸಾಲಿನಲ್ಲಿ ಭಕ್ತರು ನಿಂತು ಗಣೇಶನ ದರ್ಶನ ಪಡೆದರು. ಗಣೇಶ ಚತುರ್ಥಿಯಂದು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ

ಹಾಗಾಗಿ ಮನೆಯಲ್ಲಿ, ತಮ್ಮೂರಿನ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಇದ್ದರೂ ಮುಂಚಿತವಾಗಿ ಇಡಗುಂಜಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆ ಬಳಿಕ ಮನೆ ಊರಿನ ಗಣಪತಿಗೆ ಪೂಜಿಸುತ್ತಾರೆ. ಈ ಬಾರೀ ಸಾಕಷ್ಟು ಪ್ರಮಾಣದಲ್ಲಿ ಭಕ್ತರು ಇಡಗುಂಜಿಗೆ ಆಗಮಿಸಿದ್ದರು.