ಅಂಕೋಲಾ(Ankola) : ತಾಲೂಕಿನ ಕೇಣಿಯಲ್ಲಿ(Keni) ನಿರ್ಮಿಸಲಿರುವ ಉದ್ದೇಶಿತ ಅತೀ ದೊಡ್ಡ ವಾಣಿಜ್ಯ ಬಂದರು(Commercial Port) ಕಾಮಗಾರಿಗೆ ನಡೆಸುತ್ತಿರುವ ಸರ್ವೇ ಕಾರ್ಯವನ್ನು ಡಿ. 19 ರೊಳಗೆ ಸ್ಥಗಿತಗೊಳಿಸದಿದ್ದರೆ ತಾಲೂಕಿನ ಎಲ್ಲ ಮೀನುಗಾರರು(Fisherman) ಯಾಂತ್ರೀಕೃತ ಬೋಟುಗಳ ಮೂಲಕ ಮುತ್ತಿಗೆ ಹಾಕಿ ಸರ್ವೇ ಕಾರ್ಯವನ್ನು ನಿಲ್ಲಿಸಲಾಗುವದು ಎಂದು ಮೀನುಗಾರರ ಮುಖಂಡ ಶ್ರೀಕಾಂತ ದುರ್ಗೇಕರ ಎಚ್ಚರಿಸಿದ್ದಾರೆ(Warning).
ಅವರು ಗುರುವಾರ ಕೇಣಿ ದೇಶಿನಬಾಗ(Keni Deshinabag) ಸಭಾಭವನದಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಈ ಮಾತನಾಡಿ, ಕೇಣಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರಿಗೆ ಇಲ್ಲಿನ ಜನರ ತೀವ್ರ ವಿರೋಧವಿದೆ. ವಾರದ ಹಿಂದೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ, ಆದರೆ ಈ ವರೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎನ್ನುವದರ ಕುರಿತು ಯಾವುದೇ ಮಾಹಿತಿ ಇಲ್ಲ. ಒಂದು ಕಡೆ ಸಮುದ್ರದಲ್ಲಿ ಲಂಗರು ಹಾಕಿದ ಹಡಗು ಮತ್ತು ಟಗ್ ಮೂಲಕ ಸರ್ವೇ ಕಾರ್ಯ ಮುಂದುವರಿದಿದೆ.
ವಾಣಿಜ್ಯ ಬಂದರು ಬೇಡ ಎನ್ನುವ ಮೀನುಗಾರರ ಮನವಿಗೆ ತಾಲೂಕಾಡಳಿತವಾಗಲೀ ಜಿಲ್ಲಾಡಳಿತವಾಗಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತು ಡಿ. 19 ರೊಳಗೆ ಸರ್ವೇ ಕಾರ್ಯವನ್ನು ಸ್ಥಗಿತಗೊಳಿಸದಿದ್ದರೆ ಬೃಹತ್ ಸಂಖ್ಯೆಯಲ್ಲಿ ಮೀನುಗಾರರು ಯಾಂತ್ರೀಕೃತ ಬೋಟಗಳ ಮೂಲಕ ಟಗ್ ಬಳಿ ತೆರಳಿ ಮುತ್ತಿಗೆ ಹಾಕುತ್ತೇವೆ ಎಂದರು.
ಮೀನುಗಾರರ ಮುಖಂಡ ಹುವಾ ಖಂಡೇಕರ ಮಾತನಾಡಿ, ಇಲ್ಲಿ ಬಂದರು ನಿರ್ಮಾಣಕ್ಕಾಗಿ ಬ್ರೇಕ್ ವಾಟರ್ ಮತ್ತು ಆಳ ಮಾಡುವ ಕಾರ್ಯದಿಂದ ಮುಂದೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ನೀರು ಉಪ್ಪು ನೀರಾಗಲಿದೆ ಇದರಿಂದ ಜನರ ಜೀವನ ದುಸ್ತರವಾಗಲಿದೆ ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷೆ ಸವಿತಾ ಹರಿಕಂತ್ರ ಮಾತನಾಡಿ, ವಾಣಿಜ್ಯ ಬಂದರಿಗಾಗಿ ಬಾಳೆಗುಳಿ ರಾ. ಹೆದ್ದಾರಿಯಿಂದ ಲಿಂಕ್ ರಸ್ತೆ ನಿರ್ಮಾಣವಾಗಲಿದೆ. ಇದರಿಂದ ಮುಂದೆ ಮ್ಯಾಂಗನೀಸ್ ಧೂಳಿನಿಂದ ಇಡೀ ಪ್ರದೇಶ ಮಾಲಿನ್ಯದಿಂದ ಕಲುಷಿತವಾಗಲಿದೆ. ಹೀಗಾಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು.
ಸಂಜೀವ ಬಲೇಗಾರ ಮಾತನಾಡಿ, ಯಾವುದೇ ಕಾರಣಕ್ಕೂ ಬಂದರು ನಿರ್ಮಾಣದ ಬೇಡ, ಒಂದುವೇಳೆ ಬಲಾತ್ಕಾರದಿಂದ ಬಂದರು ನಿರ್ಮಾಣಕ್ಕೆ ಮುಂದಾದರೆ ಇಲ್ಲಿನ ಮೀನುಗಾರರಿಗೆ ರಾಷ್ಟ್ರಪತಿಗಳು ಮತ್ತು ಸುಪ್ರೀಂಕೋರ್ಟು ದಯಾಮರಣ ನೀಡಿ ನಮ್ಮ ಸಮಾಧಿಯ ಮೇಲೆ ವಾಣಿಜ್ಯ ಬಂದರು ಎಂಬ ಸೌಧ ಕಟ್ಟಲಿ ಎಂದರು.
ಗ್ರಾ. ಪಂ. ಮಾಜಿ ಸದಸ್ಯ ಚಂದ್ರಕಾಂತ ಹರಿಕಂತ್ರ, ಸುಂದರ ಖಾರ್ವಿ ಮಾತನಾಡಿದರು. ಈ ಸಂದರ್ಭದಲ್ಲಿ ಸೂರಜ ಹರಿಕಂತ್ರ, ಶಂಕರ ಎಸ್ ಬಲೆಗಾರ, ಪ್ರಮೋದ ಬಾನಾವಳಿಕರ, ಸೂರ್ಯಕಾಂತ ಭೂತೆ, ಜ್ಞಾನೇಶ್ವರ ವಿ ಹರಿಕಂತ್ರ, ಅನೀಲ ತಾಂಡೇಲ, ಹಾಲಪ್ಪ ಜಿ ಹರಿಕಂತ್ರ, ವೆಂಕಟೇಶ ಕೆ ದುರ್ಗೇಕರ, ಪ್ರಭಾಕರ ಖಾರ್ವಿ, ಗಣಪತಿ ಹರಿಕಂತ್ರ, ಸೇರಿದಂತೆ ನೂರಾರು ಮೀನುಗಾರರು ಇದ್ದರು.
ಇದನ್ನು ಓದಿ : ಗೋಕರ್ಣದಲ್ಲಿ ವಿದೇಶಿ ಮಹಿಳೆಯ ರಕ್ಷಣೆ
ವಿಶ್ವಕ್ಕೆ ಚೆಸ್ ಸಾಮ್ರಾಟನಾದ ಗುಕೇಶ್.