ಅಂಕೋಲಾ(ANKOLA): ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಆಭರಣ ಕಳ್ಳತನ ಮಾಡಿದ ಘಟನೆ ಪಟ್ಟಣದ ಹೊನ್ನಿಕೇರಿ ಕೇಣಿ ರಸ್ತೆಯಲ್ಲಿ ನಡೆದಿದೆ.
ಮೋಹನ ನಾರಾಯಣ ನಾಯಕ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಮಾಲೀಕರು ತಮ್ಮ ಪತ್ನಿಯ ಆರೋಗ್ಯ ತಪಾಸಣೆಗೆಂದು ಸೆಪ್ಟೆಂಬರ್ 28 ರಂದು ಮನೆಗೆ ಬೀಗ ಹಾಕಿ ಮಣಿಪಾಲದ ಆಸ್ಪತ್ರೆಗೆ ತೆರಳಿದ್ದರು. ರಾತ್ರಿ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲ ಚಿಲಕದ ಕೊಂಡಿ ಮುರಿದಿರುವುದು ಕಂಡು ಬಂತು. ಒಳಗೆ ಹೋಗಿ ನೋಡಿದರೆ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ಮನೆಯೊಳಗೆ ನುಗ್ಗಿದ ಕಳ್ಳರು ಮೂರು ಕಪಾಟುಗಳನ್ನು ಒಡೆದು 70 ಸಾವಿರ ನಗದು ಹಣ ಬಂಗಾರದ ಬಳೆಗಳು, ಕರಿಮಣಿ ಸರಗಳನ್ನು ಕಳ್ಳತನ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬ್ಯಾಂಕಿನ ಲಾಕರ್ ನಿಂದ ಬಂಗಾರದ ಒಡವೆಗಳನ್ನು ತಂದು ಮನೆಯಲ್ಲಿ ಇರಿಸಿದ್ದ ಮರುದಿನವೇ ಕಳ್ಳತನದ ಕೃತ್ಯ ನಡೆದಿರುವುದಾಗಿ ಗೊತ್ತಾಗಿದೆ.
ಒಟ್ಟು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿದ್ದು ಅಂಕೋಲಾ ಪೊಲೀಸರು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ (ANKOLA POLICE STATION) ಪ್ರಕರಣ ದಾಖಲಾಗಿದ್ದು ಸಿಪಿಐ ಚಂದ್ರಶೇಖರ ಮಠಪತಿ ಮಾರ್ಗದರ್ಶನದಲ್ಲಿ ಪಿ.ಎಸ್. ಐ ಸುಹಾಸ್, ಜಯಶ್ರೀ ಪ್ರಭಾಕರ್ ಮತ್ತು ಸಿಬ್ಬಂದಿಗಳು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : ಅರ್ಜುನ್ ಮಗನನ್ನು ಸಂತೈಸಿದ ಶಾಸಕ.
ಹೆದ್ದಾರಿ ಮಧ್ಯೆ ಸುಟ್ಟು ಭಸ್ಮವಾದ BMW ಕಾರು